ಇಂಜಿನಿಯರಿಂಗ್ ಕಾಲೇಜು ಆರಂಭ ; ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ
ವಿಜಯಪುರ, 24 ಜೂನ್ (ಹಿ.ಸ.) : ಆಂಕರ್ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಲಸಂಗಿ ಗ್ರಾಮದಲ್ಲಿ ಜಿಲ್ಲೆಯ ಮೂರನೇ ಇಂಜಿನಿಯರಿಂಗ್ ಕಾಲೇಜು ಆರಂಭಿಸಲಾಗಿದೆ ಎಂದು ಸ್ವಾಮಿ ನಾಗಭೂಷಣ ಗುರುಕ
Collage


ವಿಜಯಪುರ, 24 ಜೂನ್ (ಹಿ.ಸ.) :

ಆಂಕರ್ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಲಸಂಗಿ ಗ್ರಾಮದಲ್ಲಿ ಜಿಲ್ಲೆಯ ಮೂರನೇ ಇಂಜಿನಿಯರಿಂಗ್ ಕಾಲೇಜು ಆರಂಭಿಸಲಾಗಿದೆ ಎಂದು ಸ್ವಾಮಿ ನಾಗಭೂಷಣ ಗುರುಕುಲ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಹೇಳಿದರು.

ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಾಪುರ-ಇಂಡಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಹಲಸಂಗಿ ಗ್ರಾಮದ ಸಮೀಪ ಸುಸಜ್ಜಿತ ಕಟ್ಟಡ ನಿರ್ಮಿಸಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲಾಗಿದೆ. ಇಂಡಿ ಹಾಗೂ ಚಡಚಣ ತಾಲ್ಲೂಕು ಸೇರಿದಂತೆ ಗಡಿ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸ್ವಾಮಿ ನಾಗಭೂಷಣ ಗುರುಕುಲ ಸಂಸ್ಥೆಯು 2013-14ನೇ ಸಾಲಿನಿಂದಲೇ ಹಲಸಂಗಿ ಭಾಗದಲ್ಲಿ ಎಲ್ಕೆಜಿಯಿಂದ ಪಿಯುಸಿ ವರೆಗೆ ಶಿಕ್ಷಣ ಸಂಸ್ಥೆ ನಡೆಸುತ್ತಾ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇದೀಗ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟು ಇಂಜಿನಿಯರಿಂಗ್ ಕೋರ್ಸ್ಗಳನ್ನು ಆರಂಭಿಸಲಾಗಿದೆ ಎಂದರು.

ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗಗಳನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ದೊಡ್ಡ ನಗರಗಳಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪಡೆಯುವ ಶಿಕ್ಷಣಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ಗ್ರಾಮೀಣ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗದಂತೆ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಮಲ್ಲಿಕಾರ್ಜುನ ಹಿರೇಮಠ ಹೇಳಿದರು.

ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ವ್ಯವಸ್ಥೆಯನ್ನೂ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಬೋಧನೆ, ಸುಸಜ್ಜಿತ ಕ್ಯಾಂಪಸ್ ಹಾಗೂ ನುರಿತ ಬೋಧಕ ಸಿಬ್ಬಂದಿಯಿಂದ ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಆರ್. ಸರವಣನ್ ಹಾಗೂ ಕಾಲೇಜಿನ ಪ್ರಾಂಶುಪಾಲೆ ಡಾ. ಎಸ್. ಸೂರ್ಯಪ್ರಭಾ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅಗತ್ಯ ಸೌಲಭ್ಯಗಳನ್ನು ಕಾಲೇಜಿನಲ್ಲಿ ಕಲ್ಪಿಸಲಾಗಿದೆ. ಪ್ರಸ್ತುತ ತಂತ್ರಜ್ಞಾನಕ್ಕೆ ಅನುಗುಣವಾಗಿ ಪಾಠ ಬೋಧನೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಒದಗಿಸಲಾಗುತ್ತಿದೆ ಎಂದರು.

ಮಾನವ ಹಕ್ಕುಗಳ ರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಶಿವಾನಂದ ಕಾಮಗೊಂಡ ಮಾತನಾಡಿ, ಕವಿ ಮಧುರಚೆನ್ನರಂತಹ ಮಹನೀಯರ ನಾಡಾದ ಹಲಸಂಗಿಯಲ್ಲಿ ಮಲ್ಲಿಕಾರ್ಜುನ ಹಿರೇಮಠ ಅವರು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುವ ಮಹತ್ವದ ಕಾರ್ಯ ಕೈಗೊಂಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಗುರುಕುಲ ಸಂಸ್ಥೆಯ ಮೂರನೇ ಶಾಖೆಯಾಗಿ ಈ ಇಂಜಿನಿಯರಿಂಗ್ ಕಾಲೇಜು ಆರಂಭವಾಗಿದ್ದು, ಇದರಿಂದ ಇಂಡಿ-ಚಡಚಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿಯೇ ಉನ್ನತ ತಾಂತ್ರಿಕ ಶಿಕ್ಷಣ ಲಭ್ಯವಾಗುತ್ತಿರುವುದರಿಂದ ವಿದ್ಯಾರ್ಥಿಗಳು ದೂರದ ನಗರಗಳಿಗೆ ತೆರಳುವ ಅವಶ್ಯಕತೆ ಕಡಿಮೆಯಾಗಲಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande