

ಹೊಸಪೇಟೆ, 24 ಜೂನ್ (ಹಿ.ಸ.) :
ಆ್ಯಂಕರ್ : ಮಳೆಗಾಲ ಆರಂಭವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ವೇಳೆ ನೀರು ಕಲುಷಿತಗೊಳ್ಳುವ ಸಂಭವ ಹೆಚ್ಚಿರುತ್ತದೆ. ಅದರಲ್ಲೂ ಮುಖ್ಯವಾಗಿ ಚರಂಡಿ ಪಕ್ಕದ ಮತ್ತು ಹಳೆಯ ಪೈಪ್ಲೈನ್ಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಆದ್ದರಿಂದ ಹಳೆಯ ಅಥವಾ ಹೊಡೆದು ಹೋಗಿರುವ ಪೈಪ್ಲೈನ್ಗಳನ್ನು ಮುಂಜಾಗ್ರತಾ ಕ್ರಮವಾಗಿ ತ್ವರಿತವಾಗಿ ದುರಸ್ತಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಂ ಷಾ ಸೂಚಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಜಿಲ್ಲಾ ಪಂಚಾಯತ್ ಸಿಇಒ ಅವರ ಕಚೇರಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೆಜೆಎಂ ಕಾಮಗಾರಿ, ನರೇಗಾ ಸಮರ್ಪಕ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲುಷಿತ ನೀರು ಸರಬರಾಜು ಆಗದಂತೆ ಮತ್ತು ಇಂತಹ ಗಂಭೀರ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ಅತ್ಯಂತ ಎಚ್ಚರದಿಂದ ಕೆಲಸ ಮಾಡಬೇಕು. ವಿವಿಧ ತಾಂತ್ರಿಕ ಕಾರಣಗಳಿಂದ ಕೊಳವೆಬಾವಿ ನೀರು ಸರಬರಾಜು ಸಮಸ್ಯೆ ಉಂಟಾದಲ್ಲಿ ತಕ್ಷಣವೇ ಅವುಗಳನ್ನು ಸರಿಪಡಿಸಿ ಶುದ್ಧ ಕುಡಿಯುವ ನೀರು ಒದಗಿಸಬೇಕು. ಒಂದು ವೇಳೆ ತಕ್ಷಣಕ್ಕೆ ದುರಸ್ತಿ ಮಾಡಲು ಸಾಧ್ಯವಾಗದಿದ್ದರೆ, ಆಯಾ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಟ್ಯಾಂಕರ್ ಮೂಲಕ ಪರ್ಯಾಯ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಮಳೆಗಾಲದಲ್ಲಿ ಜಲಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಕಡ್ಡಾಯವಾಗಿ ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಮತ್ತು ಸಾಧ್ಯವಾದರೆ ಆರ್.ಓ ಪ್ಲಾಂಟ್ಗಳ ಶುದ್ಧ ಕುಡಿಯುವ ನೀರನ್ನು ಸೇವಿಸಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿಗಳು ಗ್ರಾಮೀಣ ಭಾಗದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನೆಲ್ಕುದುರೆ ಗ್ರಾಮವನ್ನು 24x7 ಶುದ್ಧ ಕುಡಿಯುವ ನೀರು ಪೂರೈಕೆ ಗ್ರಾಮ ಎಂದು ಘೋಷಿಸಲಾಗಿದೆ. ಅದರಂತೆ ಎಲ್ಲಾ ಮನೆಗಳಿಗೂ ನಳದ ಸಂಪರ್ಕ ಕಲ್ಪಿಸುವ ಕುರಿತು ಸಮೀಕ್ಷೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, 24x7 ನೀರು ಪೂರೈಕೆ ಗ್ರಾಮಗಳು ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾದ್ಯಂತ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾಮಗಾರಿ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುμÁ್ಠನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿಇಒ, ಮುಂದಿನ 10 ದಿನಗಳಲ್ಲಿ ಎಲ್ಲಾ ಕಾಮಗಾರಿಗಳು ಕಡ್ಡಾಯವಾಗಿ ನಿರೀಕ್ಷಿತ ಪ್ರಗತಿ ಸಾಧಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮೀಣ ಮಟ್ಟದಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಫೀಲ್ಡ್ ಟೆಸ್ಟಿಂಗ್ ಕಿಟ್ (ಈಖಿಏ) ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕು. ಓವರ್ ಹೆಡ್ ಟ್ಯಾಂಕ್ ಹಾಗೂ ಬೋರ್ವೆಲ್ಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಮತ್ತು ನಿಯಮಿತವಾಗಿ ಕಾಲ ಕಾಲಕ್ಕೆ ನೀರಿನ ಕ್ಲೋರಿನೇಶನ್ ಪ್ರಕ್ರಿಯೆ ನಡೆಸಬೇಕು. ಸ್ವಚ್ಛ ಭಾರತ ಮಿಷನ್ ಹಾಗೂ ಜಲ ಜೀವನ್ ಮಿಷನ್ ಅಡಿಯಲ್ಲಿ ಹಮ್ಮಿಕೊಳ್ಳಲಾಗಿರುವ 100 ದಿನಗಳ ವಿಶೇಷ ಅಭಿಯಾನದ ಗುರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಸಿಇಒ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ದೀಪಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್