

ಬಳ್ಳಾರಿ, 24 ಜೂನ್ (ಹಿ.ಸ.) :
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸಖಿ ಒನ್ ಸ್ಟಾಪ್ ಸೆಂಟರ್' ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಮಗ್ರ ಬೆಂಬಲ ಮತ್ತು ರಕ್ಷಣಾ ಸೇವೆಗಳನ್ನು ಒದಗಿಸುವ ಮೂಲಕ ಪ್ರಮುಖ ಆಸರೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ.ಎಂ ಅವರು ತಿಳಿಸಿದ್ದಾರೆ.
ಮಹಿಳೆಯರು ಯಾವುದೇ ರೀತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಲೈಂಗಿಕ ಹಿಂಸೆಗೆ ಒಳಗಾದ ಸಂದರ್ಭದಲ್ಲಿ ಒಂದೇ ಸೂರಿನಡಿ ತಕ್ಷಣದ ನೆರವು ಪಡೆಯಲು ಸಖಿ ಕೇಂದ್ರವು ಪ್ರಮುಖ ವೇದಿಕೆಯಾಗಿದೆ. ‘ನೊಂದ ಮಹಿಳೆ, ಹಲವು ಸಮಸ್ಯೆ, ಒಂದು ಸೂರು, ಹಲವು ಸೇವೆ’ ಎಂಬ ಧ್ಯೇಯದೊಂದಿಗೆ ಈ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ.
ಮಹಿಳೆಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಸಮಾಜದ ಮುಖ್ಯವಾಹಿನಿಗೆ ಮರಳಲು ಅಗತ್ಯ ಸಹಕಾರವನ್ನು ಕೇಂದ್ರವು ನೀಡುತ್ತ ಬಂದಿದೆ.
ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೇಂದ್ರವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು. ಪೆÇಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ದೊರಕಿಸಿಕೊಡಲಾಗುತ್ತಿದೆ.
ಕೇವಲ ನೆರವು ನೀಡುವುದಷ್ಟೇ ಅಲ್ಲದೆ, ಸಾರ್ವಜನಿಕ ಸ್ಥಳಗಳು, ಗ್ರಾಮ ಪಂಚಾಯಿತಿಗಳು, ಶಾಲೆ-ಕಾಲೇಜುಗಳು ಹಾಗೂ ಕೈಗಾರಿಕಾ ಸಂಸ್ಥೆಗಳಲ್ಲಿ ಮಹಿಳಾ ಸುರಕ್ಷತೆ, ಲಿಂಗ ಸಮಾನತೆ, ಸೈಬರ್ ಸುರಕ್ಷತೆ, ಬಾಲ್ಯ ವಿವಾಹ ತಡೆ, ಪೆÇೀಕ್ಸೋ ಕಾಯ್ದೆ ಮತ್ತು ಮಹಿಳಾ ಸಬಲೀಕರಣದ ಕುರಿತು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಸಖಿ ಕೇಂದ್ರವು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 3,667 ಫಲಾನುಭವಿಗಳಿಗೆ ಯಶಸ್ವಿಯಾಗಿ ಸೇವೆಗಳನ್ನು ಒದಗಿಸಿದೆ.
ಒದಗಿಸಲಾದ ಸೇವೆಗಳು ಮತ್ತು ಫಲಾನುಭವಿಗಳ ಸಂಖ್ಯೆ:
ಮಾನಸಿಕ-ಸಾಮಾಜಿಕ ಆಪ್ತಸಮಾಲೋಚನೆ: 998
ಕಾನೂನು ಸಮಾಲೋಚನೆ: 952
ಪೆÇಲೀಸ್ ಸಹಾಯ: 730
ವೈದ್ಯಕೀಯ ನೆರವು: 704
ತಾತ್ಕಾಲಿಕ ಆಶ್ರಯ ಸೌಲಭ್ಯ: 259
ಯಾವುದೇ ಮಹಿಳೆ ಹಿಂಸೆ, ಕಿರುಕುಳ ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ, ಅದನ್ನು ಸಹಿಸಿಕೊಳ್ಳದೆ ಧೈರ್ಯದಿಂದ ಮುಂದೆ ಬಂದು ಸಖಿ ಕೇಂದ್ರದ ನೆರವು ಪಡೆಯಬಹುದು. ಇಲ್ಲಿ ನೀಡಲಾಗುವ ಎಲ್ಲಾ ಸೇವೆಗಳು ಸಂಪೂರ್ಣ ಉಚಿತವಾಗಿದ್ದು, ಸಂತ್ರಸ್ತರ ಗೌಪ್ಯತೆಯನ್ನು ಕಟ್ಟುನಿಟ್ಟಾಗಿ ಕಾಪಾಡಲಾಗುತ್ತದೆ.
ಸಖಿ ಒನ್ ಸ್ಟಾಪ್ ಸೆಂಟರ್, ಶಾಂತಿಧಾಮ ಆವರಣ, ಕಂಟೊನ್ಮೆಂಟ್, ಬಳ್ಳಾರಿ.
ಮಾಹಿತಿಗಾಗಿ ಉಚಿತ ಮಹಿಳಾ ಸಹಾಯವಾಣಿ ಸಂಖ್ಯೆ 181 ಗೆ ಕರೆ ಮಾಡಬಹುದು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್