ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ : ವಿಜಯೇಂದ್ರ
ರಿ
Byv


ಬೆಂಗಳೂರು, 24 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಪ್ರಮಾಣದ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಗೃಹಲಕ್ಷ್ಮಿ ಯೋಜನೆ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಹಗರಣವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದಾರೆ. ಮಹಾಲೇಖಪಾಲರ (ಸಿಎಜಿ) ವರದಿಯನ್ನು ಉಲ್ಲೇಖಿಸಿರುವ ವಿಜಯೇಂದ್ರ, ಬ್ಯಾಂಕ್ ಖಾತೆಯೇ ಇಲ್ಲದ 23,262 ಜನರಿಗೆ ₹46.52 ಕೋಟಿ ಹಣ ಪಾವತಿಯಾಗಿರುವುದು ಹಾಗೂ 19,020 ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದು ವರದಿಯಲ್ಲಿ ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

ಇದಲ್ಲದೆ, 10 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಬ್ಯಾಂಕ್ ಖಾತೆಗಳು ನಿರಂತರವಾಗಿ ಬದಲಾಗಿರುವುದು ರಾಜ್ಯದ ಬಡ ಮಹಿಳೆಯರ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಅಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದ ಅರ್ಹ ಮಹಿಳೆಯರಿಗೆ ತಲುಪಬೇಕಾದ ಸಾರ್ವಜನಿಕರ ತೆರಿಗೆ ಹಣವನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿರುವ ವಿಜಯೇಂದ್ರ, ಈ ಭ್ರಷ್ಟಾಚಾರದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿಎಜಿ ಮಾಹಿತಿ ಕೇಳಿದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬ್ಯಾಂಕ್ ಖಾತೆಗಳ ವಿವರ ನೀಡದೆ ಮುಚ್ಚಿಡಲು ಯತ್ನಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಮೇಲ್ವಿಚಾರಣೆಗಾಗಿ ರಚಿಸಲಾದ ಗ್ಯಾರಂಟಿ ಅನುಷ್ಠಾನ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದ ಅವರು, ಈ ಸಮಿತಿಗಳು ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಹಂಚುವ ವೇದಿಕೆಗಳಾಗಿ ಪರಿಣಮಿಸಿವೆ ಎಂದು ಟೀಕಿಸಿದ್ದಾರೆ.

ಇದರ ಜೊತೆಗೆ, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಸುಮಾರು ₹5,000 ಕೋಟಿ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಈ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಸರ್ಕಾರ ಇನ್ನೂ ಉತ್ತರ ನೀಡಿಲ್ಲ ಎಂದು ಹೇಳಿರುವ ವಿಜಯೇಂದ್ರ, ಈ ಸಂಬಂಧ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿರುವುದನ್ನೂ ಉಲ್ಲೇಖಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ ಎನ್ನಲಾದ ಅಕ್ರಮಗಳ ಕುರಿತು ಪಾರದರ್ಶಕ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande