ಭರದಿಂದ ಸಾಗಿದ ಸೇತುವೆ ಕಾಮಗಾರಿ ; ಎರಡು ಜಿಲ್ಲೆಗಳ ಸಂಪರ್ಕಕ್ಕೆ ಹೊಸ ಕೊಂಡಿ
ಬಾಗಲಕೋಟೆ, 24 ಜೂನ್ (ಹಿ.ಸ.) : ಆಂಕರ್ : ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ಮಹತ್ವದ ಮಹಿಷವಾಡಗಿ ಸೇತುವೆ ನಿರ್ಮಾಣ ಕಾಮಗಾರಿ ಇದೀಗ ಭರದಿಂದ ಸಾಗುತ್ತಿದೆ. ರಬಕವಿ-ಬನಹಟ್ಟಿ ನಗರದಿಂದ ಮಹಿಷವಾಡಗಿ ಮಾರ್ಗವಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿಗೆ ನ
ಕಾಮಗಾರಿ


ಬಾಗಲಕೋಟೆ, 24 ಜೂನ್ (ಹಿ.ಸ.) :

ಆಂಕರ್ : ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ಮಹತ್ವದ ಮಹಿಷವಾಡಗಿ ಸೇತುವೆ ನಿರ್ಮಾಣ ಕಾಮಗಾರಿ ಇದೀಗ ಭರದಿಂದ ಸಾಗುತ್ತಿದೆ.

ರಬಕವಿ-ಬನಹಟ್ಟಿ ನಗರದಿಂದ ಮಹಿಷವಾಡಗಿ ಮಾರ್ಗವಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿಗೆ ನೇರ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣದಿಂದ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರುವ ನಿರೀಕ್ಷೆ ಮೂಡಿದೆ.

ಸೇತುವೆ ನಿರ್ಮಾಣ ಪೂರ್ಣಗೊಂಡ ಬಳಿಕ ರಬಕವಿ-ಬನಹಟ್ಟಿ, ಮಹಿಷವಾಡಗಿ ಹಾಗೂ ಅಥಣಿ ತಾಲೂಕಿನ ಹಲವು ಗ್ರಾಮಗಳ ನಡುವೆ ಸಂಚಾರ ವ್ಯವಸ್ಥೆ ಸುಲಭವಾಗಲಿದ್ದು, ಹತ್ತಾರು ಹಳ್ಳಿಗಳ ಸಾವಿರಾರು ಜನರಿಗೆ ನೇರ ಪ್ರಯೋಜನ ದೊರೆಯಲಿದೆ. ಕೃಷಿ, ವ್ಯಾಪಾರ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಗೆ ಸಂಚರಿಸುವ ಜನರಿಗೆ ಇದು ಪ್ರಮುಖ ಸಂಪರ್ಕ ಮಾರ್ಗವಾಗಲಿದೆ.

ಸದ್ಯ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸೇತುವೆ ಕಾಮಗಾರಿಗೆ ವೇಗ ದೊರೆತಿದೆ. ಕಾರ್ಮಿಕರು ಹಾಗೂ ಯಂತ್ರೋಪಕರಣಗಳ ನೆರವಿನಿಂದ ಕಾಮಗಾರಿ ಚುರುಕಾಗಿ ನಡೆಯುತ್ತಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ಮುಂದುವರಿದಿದೆ.

ಈ ಹಿಂದೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ ಸಂದರ್ಭದಲ್ಲಿ ಸ್ಥಳೀಯ ಪ್ರಜ್ಞಾವಂತ ನಾಗರಿಕರು ಹಾಗೂ ಸಾರ್ವಜನಿಕರು ಹೋರಾಟ ನಡೆಸಿ ಕಾಮಗಾರಿಗೆ ವೇಗ ನೀಡುವಂತೆ ಒತ್ತಾಯಿಸಿದ್ದರು. ಸಾರ್ವಜನಿಕರ ಒತ್ತಾಯದ ಬಳಿಕ ಕಾಮಗಾರಿ ಮತ್ತೆ ಚುರುಕುಗೊಂಡಿದ್ದು, ಇದೀಗ ಸೇತುವೆ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ.

ಪ್ರಸ್ತುತ ಸೇತುವೆ ಪಕ್ಕದಲ್ಲಿರುವ ಬ್ಯಾರೇಜ್ ಮೇಲೆಯೇ ದ್ವಿಚಕ್ರ ವಾಹನಗಳ ಸಂಚಾರ ನಡೆಯುತ್ತಿದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾದಾಗ ಈ ಮಾರ್ಗದಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸೇತುವೆ ನಿರ್ಮಾಣ ಪೂರ್ಣಗೊಂಡರೆ ಈ ಭಾಗದ ಜನರಿಗೆ ವರ್ಷಪೂರ್ತಿ ಸುರಕ್ಷಿತ ಹಾಗೂ ಸುಗಮ ಸಾರಿಗೆ ಸೌಲಭ್ಯ ದೊರೆಯಲಿದೆ.

ಮಹಿಷವಾಡಗಿ ಸೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ನಡುವಿನ ಆರ್ಥಿಕ ಹಾಗೂ ಸಾಮಾಜಿಕ ಸಂಪರ್ಕ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಸ್ಥಳೀಯರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande