
ಬಳ್ಳಾರಿ, 24 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಮೀನುಗಾರರು ಹಾಗೂ ಮೀನು ಕೃಷಿಕರ ಆರ್ಥಿಕ ಪ್ರಗತಿಗಾಗಿ ಮೀನುಗಾರಿಕೆ ಇಲಾಖೆ ವತಿಯಿಂದ 2026-27ನೇ ಸಾಲಿಗೆ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು ಹಾಗೂ ಸಂಡೂರು ತಾಲೂಕುಗಳ ವ್ಯಾಪ್ತಿಯಲ್ಲಿ ಮೀನುಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಬ್ಯಾಂಕುಗಳ ಮೂಲಕ ಸಾಲದ ಸೌಲಭ್ಯ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು:?
ಮೀನುಗಾರರ ಸಹಕಾರ ಸಂಘಗಳ ಸದಸ್ಯರು, ವೃತ್ತಿಪರ ಮೀನುಗಾರರು, ಮೀನುಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಆಸಕ್ತಿ ಹೊಂದಿರುವ ಕೃಷಿಕರು.
ಅಗತ್ಯವಿರುವ ಪ್ರಮುಖ ದಾಖಲೆಗಳು :
ನಿಗದಿತ ನಮೂನೆಯ ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ, ಪಾನ್ ಕಾರ್ಡ್ ಪ್ರತಿ, ತಾವು ಮೀನುಗಾರಿಕೆ ಮಾಡುತ್ತಿರುವ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕಾಗಿರುತ್ತದೆ.
ಆಸಕ್ತ ಅರ್ಹ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕುಗಳ ವ್ಯಾಪ್ತಿಯ ಫಲಾನುಭವಿಗಳು ಬಳ್ಳಾರಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಮತ್ತು ಸಂಡೂರು ತಾಲೂಕಿನ ಫಲಾನುಭವಿಗಳು ಸಂಡೂರಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ, ಅಗತ್ಯ ದಾಖಲೆಗಳೊಂದಿಗೆ ಜುಲೈ 10 ರೊಳಗಾಗಿ ಅರ್ಜಿ ಸಲ್ಲಿಸಿ ಬ್ಯಾಂಕುಗಳಿಂದ ಆರ್ಥಿಕ ಸಹಾಯಧನ ಹಾಗೂ ಸಾಲದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಬಳ್ಳಾರಿ ಮತ್ತು ಸಂಡೂರು ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್