ಗೃಹಲಕ್ಷ್ಮಿ ಹೆಸರಿನಲ್ಲಿ ಲೂಟಿ ಕಾಂಗ್ರೆಸ್ ಸರ್ಕಾರದ ಅಸಲಿ ಗ್ಯಾರೆಂಟಿ : ಅಶೋಕ್
ಬೆಂಗಳೂರು, 24 ಜೂನ್ (ಹಿ.ಸ.) : ಆ್ಯಂಕರ್ : ಗೃಹಲಕ್ಷ್ಮಿ ಯೋಜನೆಯಡಿ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆಯಾಗಿರುವ ಕುರಿತು ಮಹಾಲೇಖಪಾಲರ (ಸಿಎಜಿ) ಡೇಟಾ ಅನಾಲಿಟಿಕ್ಸ್ ವರದಿಯನ್ನು ಉಲ್ಲೇಖಿಸಿ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮ
ಅಶೋಕ


ಬೆಂಗಳೂರು, 24 ಜೂನ್ (ಹಿ.ಸ.) :

ಆ್ಯಂಕರ್ : ಗೃಹಲಕ್ಷ್ಮಿ ಯೋಜನೆಯಡಿ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆಯಾಗಿರುವ ಕುರಿತು ಮಹಾಲೇಖಪಾಲರ (ಸಿಎಜಿ) ಡೇಟಾ ಅನಾಲಿಟಿಕ್ಸ್ ವರದಿಯನ್ನು ಉಲ್ಲೇಖಿಸಿ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮಹಿಳಾ ಸಬಲೀಕರಣದ ಹೆಸರಿನಲ್ಲಿ ಜಾರಿಗೊಂಡಿರುವ ಗೃಹಲಕ್ಷ್ಮಿ ಯೋಜನೆ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಹಗರಣವಾಗಿ ಪರಿಣಮಿಸಿದೆ ಎಂದು ಆರೋಪಿಸಿದ್ದಾರೆ.

ಸಿಎಜಿ ವರದಿ ಪ್ರಕಾರ, 19,020 ಗೃಹಲಕ್ಷ್ಮಿ ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ ಲಿಂಕ್ ಆಗಿದ್ದು, ಆ ಖಾತೆಗೆ ಪ್ರತಿ ತಿಂಗಳು ಸುಮಾರು ₹3.80 ಕೋಟಿ ಹಣ ಜಮೆಯಾಗುತ್ತಿದೆ ಎಂದು ಅಶೋಕ ಹೇಳಿದ್ದಾರೆ. ಈ ಖಾತೆ ಯಾರದ್ದು ಹಾಗೂ ಆ ಹಣ ಯಾರಿಗೆ ತಲುಪುತ್ತಿದೆ ಎಂಬುದರ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದಲ್ಲದೆ, ಯಾವುದೇ ಅಧಿಕೃತ ಬ್ಯಾಂಕ್ ಖಾತೆ ವಿವರಗಳಿಲ್ಲದ 23,262 ಖಾತೆಗಳಿಗೆ ಒಟ್ಟು ₹46.52 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ದಾಖಲೆಗಳೇ ಇಲ್ಲದ ಖಾತೆಗಳಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ವರ್ಗಾವಣೆ ಹೇಗೆ ಸಾಧ್ಯವಾಗಿದೆ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಕೆಲವು ಫಲಾನುಭವಿಗಳ ಹೆಸರಿನಲ್ಲಿ ಪದೇ ಪದೇ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿರುವುದು ಪತ್ತೆಯಾಗಿದ್ದು, ಇಂತಹ 10 ಲಕ್ಷಕ್ಕೂ ಹೆಚ್ಚು ಶಂಕಾಸ್ಪದ ದಾಖಲೆಗಳು ಕಂಡುಬಂದಿವೆ ಎಂದು ಅಶೋಕ್ ತಿಳಿಸಿದ್ದಾರೆ.

ಸಿಎಜಿ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಲವು ಬಾರಿ ಮಾಹಿತಿ ಕೇಳಿ ಜ್ಞಾಪನಾ ಪತ್ರ ಕಳುಹಿಸಿದ್ದರೂ, ಸರ್ಕಾರ ಸಮರ್ಪಕ ಮಾಹಿತಿ ನೀಡದೇ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸುತ್ತಿದೆಯೇ ಅಥವಾ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆಯೇ ಎಂಬ ಬಗ್ಗೆ ಅನುಮಾನಗಳು ಮೂಡಿವೆ ಎಂದು ಅಶೋಕ ಹೇಳಿದ್ದಾರೆ.

ಈ ಕುರಿತು ಉನ್ನತ ಮಟ್ಟದ, ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತಂದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande