
ವಿಜಯಪುರ, 24 ಜೂನ್ (ಹಿ.ಸ.) :
ಆಂಕರ್ : ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿ ಮಹಾರಾಷ್ಟ್ರ ರಾಜ್ಯಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿ ಭೇದಿಸಿದ್ದಾರೆ.
ದಿನಾಂಕ 23-06-2026 ರಂದು ಮಧ್ಯ ರಾತ್ರಿ ಜಲನಗರ ಪೊಲೀಸ್ ಠಾಣೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ಗೋವಾ ರಾಜ್ಯದಿಂದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ಮದ್ಯವನ್ನು ಪತ್ತೆ ಹಚ್ಚಲಾಗಿದೆ.
ಈ ಸಂಬಂಧ ನಾಲ್ವರು ಆರೋಪಿಗಳನ್ನು ದಸ್ತಗೀರ ಮಾಡಲಾಗಿದ್ದು, ಅವರಿಂದ ಅಕ್ರಮ ಮದ್ಯ ಸೇರಿದಂತೆ ಸಾಗಾಟಕ್ಕೆ ಬಳಸಿದ್ದ ವಾಹನ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿತರು ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ತಂದು ಕರ್ನಾಟಕ ಮಾರ್ಗವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ ಜಲನಗರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅಕ್ರಮ ಸಾಗಾಟವನ್ನು ತಡೆದಿದ್ದಾರೆ.
ಬಂಧಿತ ಆರೋಪಿಗಳಿಂದ ಒಟ್ಟು ₹1,36,82,880 (ಒಂದು ಕೋಟಿ ಮೂವತ್ತಾರು ಲಕ್ಷ ಎಂಬತ್ತೆರಡು ಸಾವಿರದ ಎಂಭತ್ತು ರೂಪಾಯಿ) ಮೌಲ್ಯದ ಅಕ್ರಮ ಮದ್ಯ, ಕೃತ್ಯಕ್ಕೆ ಬಳಸಿದ ಲಾರಿ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಜಲನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಾಚರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದು, ಅಕ್ರಮ ಮದ್ಯ ಸಾಗಾಟ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಜಿಲ್ಲೆಯಲ್ಲಿ ಕಠಿಣ ಕ್ರಮ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande