
ಬೆಂಗಳೂರು, 24 ಜೂನ್ (ಹಿ.ಸ.) :
ಆ್ಯಂಕರ್ : ಶಿವಮೊಗ್ಗದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸಂಚಾರಿ (ಸರ್ಕ್ಯೂಟ್) ಪೀಠವನ್ನು ಸ್ಥಾಪಿಸುವಂತೆ ಹಾಗೂ ಅದು ಸ್ಥಾಪನೆಯಾಗುವವರೆಗೆ ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರಿನ ಪ್ರಧಾನ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸುವಂತೆ ಆಗ್ರಹಿಸಿ ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ ಜನಪ್ರತಿನಿಧಿಗಳು ಹಾಗೂ ವಕೀಲರ ನಿಯೋಗವು ಬುಧವಾರ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗವು ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಬಳಿಕ ಶಿವಮೊಗ್ಗ ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾದ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಕುರಿತು ವಿವರವಾದ ಮನವಿಪತ್ರವನ್ನು ಸಲ್ಲಿಸಿತು. ಮಲೆನಾಡು ಮತ್ತು ಮಧ್ಯ ಕರ್ನಾಟಕ ಭಾಗದ ಜನರಿಗೆ ನ್ಯಾಯಾಂಗ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕೆಂದು ಒತ್ತಾಯಿಸಲಾಯಿತು.
ಮನವಿಯಲ್ಲಿ, ಕಳೆದ ಹಲವು ತಿಂಗಳುಗಳಿಂದ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ ಹಾಗೂ ಭದ್ರಾವತಿ ವಕೀಲರ ಸಂಘಗಳು ಸೇರಿದಂತೆ ವಿವಿಧ ಸಾಮಾಜಿಕ, ನಾಗರಿಕ ಮತ್ತು ವೃತ್ತಿಪರ ಸಂಘಟನೆಗಳು ಈ ಬೇಡಿಕೆಗಾಗಿ ಶಾಂತಿಯುತ ಹೋರಾಟ ನಡೆಸುತ್ತಿರುವುದನ್ನು ಉಲ್ಲೇಖಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯು ಭೌಗೋಳಿಕವಾಗಿ ಮಲೆನಾಡು ಮತ್ತು ಮಧ್ಯ ಕರ್ನಾಟಕ ಭಾಗಗಳ ಪ್ರಮುಖ ಕೇಂದ್ರವಾಗಿದ್ದು, ಶಿಕ್ಷಣ, ವಾಣಿಜ್ಯ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿಯೂ ಪ್ರಮುಖ ಸ್ಥಾನ ಹೊಂದಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಜನರು ಮೇಲ್ಮನವಿ ವಿಚಾರಗಳಿಗಾಗಿ ದೂರದ ನ್ಯಾಯಾಂಗ ಕೇಂದ್ರಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಸಂಚಾರಿ ಪೀಠ ಸ್ಥಾಪನೆಯಾದರೆ ನ್ಯಾಯ ಪಡೆಯುವ ಪ್ರಕ್ರಿಯೆ ಸುಲಭವಾಗುವುದರ ಜೊತೆಗೆ ಸಾರ್ವಜನಿಕರ ಸಮಯ ಮತ್ತು ಪ್ರಯಾಣ ವೆಚ್ಚವೂ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, “ಜನರ ಬಳಿಗೆ ನ್ಯಾಯ” ಎಂಬ ಸಂವಿಧಾನದ ಆಶಯವನ್ನು ಸಾಕಾರಗೊಳಿಸುವ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.
ಇದೇ ವೇಳೆ ಶಿವಮೊಗ್ಗ ಜಿಲ್ಲೆಯನ್ನು ಮಂಗಳೂರಿನ ಪ್ರಸ್ತಾವಿತ ಪೀಠದ ವ್ಯಾಪ್ತಿಗೆ ಸೇರಿಸುವ ಸಾಧ್ಯತೆಗಳ ಬಗ್ಗೆ ಕೇಳಿಬರುತ್ತಿರುವ ಮಾಹಿತಿಯಿಂದ ಜಿಲ್ಲೆಯ ವಕೀಲರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಶಿವಮೊಗ್ಗ ಜಿಲ್ಲೆಗೆ ಬೆಂಗಳೂರಿನೊಂದಿಗೆ ಉತ್ತಮ ರಸ್ತೆ ಹಾಗೂ ಸಾರಿಗೆ ಸಂಪರ್ಕವಿದ್ದು, ಜನರಿಗೆ ಬೆಂಗಳೂರಿಗೆ ತೆರಳುವುದು ಸುಲಭವಾಗಿದೆ. ಆದರೆ ಕರಾವಳಿ ಭಾಗಕ್ಕೆ ತೆರಳಲು ಪಶ್ಚಿಮ ಘಟ್ಟಗಳ ದುರ್ಗಮ ಮಾರ್ಗಗಳನ್ನು ಅವಲಂಬಿಸಬೇಕಾಗುತ್ತದೆ. ಮಳೆಗಾಲದಲ್ಲಿ ಭೂಕುಸಿತ ಹಾಗೂ ಪ್ರಕೃತಿ ವಿಕೋಪಗಳಿಂದ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಹೆಚ್ಚಿರುವುದರಿಂದ ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರಿನ ಪ್ರಧಾನ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸಬೇಕು ಎಂದು ಒತ್ತಾಯಿಸಲಾಗಿದೆ.
ಮನವಿಯಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಶೀಘ್ರ ಕೈಗೊಳ್ಳಬೇಕು. ಅಲ್ಲಿಯವರೆಗೆ ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರಿನ ಪ್ರಧಾನ ಪೀಠದ ವ್ಯಾಪ್ತಿಯಿಂದ ಬೇರ್ಪಡಿಸಬಾರದು ಎಂದು ಮುಖ್ಯಮಂತ್ರಿ ಅವರಿಗೆ ಕೋರಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ ಹಾಗೂ ಅರುಣ್ ಶಂಕರ್ ಮೂರ್ತಿ, ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಬಸಪ್ಪಗೌಡ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.