ಕ್ರಿಕೆಟ್ ಒಗ್ಗಟ್ಟು, ಕ್ರೀಡಾ ಮನೋಭಾವ ಬೆಳೆಸುವ ವೇದಿಕೆ : ಶಾಸಕ ಸುನೀಲಗೌಡ ಪಾಟೀಲ
ವಿಜಯಪುರ, 24 ಜೂನ್ (ಹಿ.ಸ.) : ಆಂಕರ್ : ಕ್ರಿಕೆಟ್ ಕೇವಲ ಒಂದು ಕ್ರೀಡೆಯಲ್ಲ, ಅದು ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮನೋಭಾವವನ್ನು ಬೆಳೆಸುವ ಶಕ್ತಿಯುತ ವೇದಿಕೆಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದರು. ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಮುಸ್ಸಂಜೆ ದಿ. ಬಿ. ಎ
Cricket


ವಿಜಯಪುರ, 24 ಜೂನ್ (ಹಿ.ಸ.) :

ಆಂಕರ್ : ಕ್ರಿಕೆಟ್ ಕೇವಲ ಒಂದು ಕ್ರೀಡೆಯಲ್ಲ, ಅದು ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮನೋಭಾವವನ್ನು ಬೆಳೆಸುವ ಶಕ್ತಿಯುತ ವೇದಿಕೆಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದರು.

ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಮುಸ್ಸಂಜೆ ದಿ. ಬಿ. ಎಂ. ಪಾಟೀಲ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಬಬಲೇಶ್ವರ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಟೂರ್ನಾಮೆಂಟ್ ಅನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ನಂತರ ಸಸಿಗೆ ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದಿ. ಬಿ. ಎಂ. ಪಾಟೀಲ ಅವರ ಹೆಸರಿನಲ್ಲಿ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಿರುವುದು ಸಂತಸದ ವಿಷಯವಾಗಿದೆ. ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರಾಗಿದ್ದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ತಪ್ಪಿಸಲು ಬಿ.ಎಲ್.ಡಿ.ಇ ಸಂಸ್ಥೆ ಮೂಲಕ ಹೆಚ್ಚಿನ ಶಾಲೆಗಳು, ಕಾಲೇಜುಗಳು ಹಾಗೂ ವಿವಿಧ ಕೋರ್ಸ್ಗಳನ್ನು ಆರಂಭಿಸಿ ಶಿಕ್ಷಣಕ್ಕೆ ಉತ್ತೇಜನ ನೀಡಿದರು ಎಂದು ಸುನೀಲಗೌಡ ಪಾಟೀಲ ಸ್ಮರಿಸಿದರು.

ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದರ ಜೊತೆಗೆ, ಇತರ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೂ ಸಹಾಯ ಮಾಡಿದ್ದ ಬಿ.ಎಂ. ಪಾಟೀಲರು ತಮ್ಮ ಜೀವನವನ್ನು ಶಿಕ್ಷಣ ಮತ್ತು ಜನಸೇವೆಗೆ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.

ತಮ್ಮ ಸಹೋದರ ಹಾಗೂ ಸಚಿವ ಎಂ. ಬಿ. ಪಾಟೀಲ ಅವರು ಜಲಕ್ರಾಂತಿಯ ಮೂಲಕ ವಿಜಯಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇಂದು ಕೆಜಿಯಿಂದ ಪಿಜಿವರೆಗೆ ಶಿಕ್ಷಣ ಪಡೆಯುವ ಅವಕಾಶಗಳು ಜಿಲ್ಲೆಯಲ್ಲೇ ಲಭ್ಯವಾಗಿವೆ ಎಂದು ತಿಳಿಸಿದರು.

ಕ್ರಿಕೆಟ್ ಟೂರ್ನಾಮೆಂಟ್ಗಳು ಪ್ರತಿಭಾವಂತ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆ ಒದಗಿಸುತ್ತವೆ. ಕ್ರೀಡೆಯಲ್ಲಿ ಗೆಲುವಿಗಿಂತ ಮುಖ್ಯವಾಗಿ ಶಿಸ್ತು, ಸಹಕಾರ ಮತ್ತು ಸೌಹಾರ್ದತೆ ಬೆಳೆಸಿಕೊಳ್ಳಬೇಕು. ಯುವಕರು ಸ್ಪರ್ಧಾತ್ಮಕ ಮನೋಭಾವದೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಬಿ.ಎಲ್.ಡಿ.ಇ ಸಂಸ್ಥೆ ವತಿಯಿಂದ ಬಿ. ಎಂ. ಪಾಟೀಲ ಸ್ಪೋರ್ಟ್ಸ್ ಅಕಾಡೆಮಿ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಟೆನಿಕಾಯ್ಟ್, ಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಯುವಕರು ಶಿಕ್ಷಣ, ಕ್ರೀಡೆ, ಸಮಾಜ ಸೇವೆ ಹಾಗೂ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬೆಳೆಯಲು ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಯುವಶಕ್ತಿ ದೃಢ ಸಂಕಲ್ಪ ಮಾಡಿದರೆ ಅಸಾಧ್ಯವಾದುದನ್ನೂ ಸಾಧಿಸಬಹುದು. ಯುವಕರು ತಂಡವಾಗಿ ಕೆಲಸ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಸುನೀಲಗೌಡ ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಬಿಜಾಪುರ ಬುಲ್ಸ್ ತಂಡವನ್ನು ಪ್ರತಿನಿಧಿಸಿರುವ ಯುವ ಕ್ರಿಕೆಟರ್ ಅಕ್ಷಯ ಬಿರಾದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಂತಯ್ಯ ಕರೆಗೊಳ ಸಾನಿಧ್ಯ ವಹಿಸಿದ್ದರು. ಪಿಎಸ್ಐ ಬಸನಗೌಡ ಬಿ.ಎಂ., ಮುಖಂಡರಾದ ಪ್ರಕಾಶ ಜಾಲಗೇರಿ, ಮಹೇಶ ಮಾಳಿ, ಸಿದ್ದು ಬಿಳೂರ, ಬಾಪುರಾಯ ಜಂಗಮಶೆಟ್ಟಿ, ಮಹಾಂತೇಶ ಕೊಣ್ಣೂರ, ಜಾಫರ್ ನೀಡೋಣಿ, ರಾಣಪ್ಪ ಹೊಸಮನಿ, ಹನುಮಂತ ಬಡಚಿ, ಬಸವರಾಜ ಲೋಕುರಿ, ವಸಂತ ವಿಧಾತೆ, ರಾಜಗುರು ಉಳ್ಳಾಗಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande