





ಬೆಂಗಳೂರು, 23 ಜೂನ್ (ಹಿ.ಸ.) :
ಆ್ಯಂಕರ್ : ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ರಾಜ್ಯ ಶಾಖೆ ಹಾಗೂ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ–2026 ಕಾರ್ಯಕ್ರಮವನ್ನು ಬೆಂಗಳೂರು ನಗರದ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನ ಜ್ಯೋತಿ ಸೆಮಿನಾರ್ ಹಾಲ್ನಲ್ಲಿ ವಿಜೃಂಭಣೆಯಿಂದ ಜರುಗಿತು.
“ಒಂದು ಹನಿ ಮಾನವೀಯತೆ – ರಕ್ತದಾನ ಮಾಡಿ, ಜೀವ ಉಳಿಸಿ” ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಿರ್ದೇಶಕರಾದ ರಜನೀಶ್ ಶರ್ಮಾ ಉದ್ಘಾಟಿಸಿ ಮಾತನಾಡಿ, ರಕ್ತದಾನವು ಅತ್ಯುನ್ನತ ಮಾನವೀಯ ಸೇವೆಯಾಗಿದ್ದು, ಸ್ವಯಂಪ್ರೇರಿತ ರಕ್ತದಾನಿಗಳ ಸೇವೆ ಸಮಾಜಕ್ಕೆ ಅಪಾರ ಕೊಡುಗೆಯಾಗಿದೆ ಎಂದು ತಿಳಿಸಿದರು.
ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸುತ್ತಿರುವ ದಾನಿಗಳನ್ನು ಅಭಿನಂದಿಸಿ, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಚಳುವಳಿಗೆ ಸೇರ್ಪಡೆಯಾಗಬೇಕೆಂದು ಕರೆ ನೀಡಿದರು.
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಮೇಶ್ ಬಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ , ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ರಕ್ತದಾನದ ಮಹತ್ವವನ್ನು ಯುವಜನರಲ್ಲಿ ಅರಿವು ಮೂಡಿಸಿ, ಪ್ರತಿಯೊಬ್ಬರೂ ಸ್ವಯಂಪ್ರೇರಿತ ರಕ್ತದಾನಿಗಳಾಗುವಂತೆ ಪ್ರೇರೇಪಿಸಬೇಕೆಂದು ಹೇಳಿದರು.
ಕರ್ನಾಟಕ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಮಾತನಾಡಿ, ರಕ್ತದಾನಿಗಳು ಸಮಾಜದಲ್ಲಿ ನಿಜವಾದ ನಾಯಕರಾಗಿದ್ದು, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜೀವ ರಕ್ಷಣೆಗಾಗಿ ನೀಡುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು. ಆರೋಗ್ಯ ಕ್ಷೇತ್ರಕ್ಕೆ ರಕ್ತದಾನಿಗಳ ಕೊಡುಗೆ ಅಮೂಲ್ಯವಾಗಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.
ಎಂಇಜಿ ಕೇಂದ್ರದ ಕರ್ನಲ್ ಪ್ರೊಸೆಂಜಿತ್ ದೇಬ್ ಮಾತನಾಡಿ, ತುರ್ತು ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳು ಹಾಗೂ ಅಪಘಾತ ಸಂದರ್ಭಗಳಲ್ಲಿ ರಕ್ತದ ಅಗತ್ಯತೆ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬ ಆರೋಗ್ಯವಂತ ನಾಗರಿಕರೂ ನಿಯಮಿತವಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು. ಸುರಕ್ಷಿತ ಹಾಗೂ ಸಮರ್ಪಕ ರಕ್ತ ಸಂಗ್ರಹವು ಆರೋಗ್ಯ ವ್ಯವಸ್ಥೆಯ ಬಲವರ್ಧನೆಗೆ ಅಗತ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹಾಗೂ ಉಪಸಭಾಪತಿಗಳಾದ ಡಾ. ಶ್ರೀನಿವಾಸ್ ಎಸ್. ಹ್ಯಾಟಿ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ರಕ್ತದಾನಿಗಳಿಗೆ ಸನ್ಮಾನ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ 25 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ 12 ಜನ ಸ್ವಯಂಪ್ರೇರಿತ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ಎ.ಎಂ. ಸುರೇಶ್ (86 ಬಾರಿ), ರಾಘವೇಂದ್ರ ಜಿ.ಎನ್. (78 ಬಾರಿ), ಎಂ. ಕಾರ್ತಿಕ್ (70ಕ್ಕೂ ಹೆಚ್ಚು ಬಾರಿ), ಡಾ. ಮಹೇಶ್ ಯಾಲೆಲಿಂಗಪ್ಪ (42 ಬಾರಿ), ನಾಗೇಶ್ ಬಾಳ್ನಾಡ್ (39 ಬಾರಿ), ಟಿ.ಆರ್. ನಾಗೇಶ್ (36 ಬಾರಿ), ರಾಮ್ ಕಿರಣ್ ಕೆ. (30 ಬಾರಿ), ನಾಗರಾಜನಾಯಕ ಡೊಳ್ಳಿನ್ (29 ಬಾರಿ), ರಾಘವೇಂದ್ರ ಶೆಟ್ಟಿ (27 ಬಾರಿ), ಅನಿಲ್ ರಾಜ್ ಎಚ್.ಸಿ. (27 ಬಾರಿ), ಮಹಾಂತೇಶ್ ಹೊಳೆಮ್ಮನವರ (26 ಬಾರಿ) ಹಾಗೂ ಹೇಮಂತ್ ಕಿಶೋರ್ ಮೋದಿ (26 ಬಾರಿ) ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸನ್ಮಾನಿತ ರಕ್ತದಾನಿಗಳ ಪರವಾಗಿ ಕೊಪ್ಪಳದ ನಾಗರಾಜನಾಯಕ ಡಿ.ಡೊಳ್ಳಿನ ಮಾತನಾಡಿದರು,
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ರಕ್ತದಾನದ ಮಹತ್ವದ ಬಗ್ಗೆ ಅರಿವು ಪಡೆದು, ಭವಿಷ್ಯದಲ್ಲಿ ನಿಯಮಿತವಾಗಿ ರಕ್ತದಾನ ಮಾಡುವ ಸಂಕಲ್ಪ ಕೈಗೊಂಡರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ರಾಜ್ಯ ಶಾಖೆಯ ಉಪಸಭಾಪತಿಗಳಾದ ಡಾ. ಶ್ರೀನಿವಾಸ್ ಎಸ್. ಹ್ಯಾಟಿ ಅವರು ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್