ಬಾಡಿಹಾಳ ಕೆರೆಯಲ್ಲಿ ನೀರಿನ ಕೊರತೆಗೆ ಲಕ್ಷಾಂತರ ಮೀನುಗಳ ಸಾವು ; ಮೀನುಗಾರರಿಗೆ ಭಾರಿ ನಷ್ಟ
ವಿಜಯಪುರ, 23 ಜೂನ್ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಾಡಿಹಾಳ ಗ್ರಾಮದ ಕೆರೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದ ಪರಿಣಾಮ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕೆರೆಯ ನೀರು ಬಹುತೇಕ ಬತ್ತಿ ಹೋಗಿದ್ದು, ಆಮ್ಲಜನಕದ ಕೊರತೆಯಿಂದಾಗಿ ದೊಡ್ಡ ಪ್ರಮಾಣದಲ್ಲ
Minu savu


ವಿಜಯಪುರ, 23 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಾಡಿಹಾಳ ಗ್ರಾಮದ ಕೆರೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದ ಪರಿಣಾಮ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕೆರೆಯ ನೀರು ಬಹುತೇಕ ಬತ್ತಿ ಹೋಗಿದ್ದು, ಆಮ್ಲಜನಕದ ಕೊರತೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಮೀನುಗಳು ಮೃತಪಟ್ಟಿವೆ.

ಕಳೆದ ಕೆಲವು ದಿನಗಳಿಂದ ಕೆರೆಯ ನೀರಿನ ಮಟ್ಟ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಇದರ ಪರಿಣಾಮವಾಗಿ ಮೀನುಗಳು ತೀರ ಪ್ರದೇಶದತ್ತ ತೇಲಿ ಬಂದು ಸಾಯುತ್ತಿರುವ ದೃಶ್ಯ ಕಂಡು ಬಂದಿದೆ.

ಕೆರೆಯಲ್ಲಿ ಸಾಕಲಾಗಿದ್ದ ಅಪಾರ ಪ್ರಮಾಣದ ಮೀನು ಸಂಪತ್ತು ನಾಶವಾಗಿದ್ದು, ಮೀನುಗಾರಿಕೆ ವೃತ್ತಿಯನ್ನೇ ಅವಲಂಬಿಸಿರುವ ಸ್ಥಳೀಯ ಮೀನುಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗದಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ನೀರಿನ ಕೊರತೆಯಿಂದ ಕೆರೆಯ ಪರಿಸರ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರಿದ್ದು, ಜಲಚರಗಳ ಜೀವಕ್ಕೆ ಅಪಾಯ ಎದುರಾಗಿದೆ.

ಮೀನುಗಾರರು ಕೆರೆಯಲ್ಲಿ ಬೆಳೆಸಿದ್ದ ಮೀನುಗಳು ಸಾವನ್ನಪ್ಪಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಹಲವು ತಿಂಗಳ ಶ್ರಮ ಹಾಗೂ ಹೂಡಿಕೆ ಕ್ಷಣಾರ್ಧದಲ್ಲಿ ನಾಶವಾಗಿದ್ದು, ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ, ಸತ್ತ ಮೀನುಗಳಿಂದ ಕೆರೆಯ ಸುತ್ತಮುತ್ತ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.

ಕೆರೆಯ ಸ್ವಚ್ಛತೆ, ಸತ್ತ ಮೀನುಗಳ ತೆರವು ಹಾಗೂ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಮೀನುಗಾರರಿಗೆ ಪರಿಹಾರ ಒದಗಿಸುವುದು ಹಾಗೂ ಕೆರೆಗೆ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande