



ಕೊಪ್ಪಳ, 23 ಜೂನ್ (ಹಿ.ಸ.) :
ಆ್ಯಂಕರ್ : ತಾಲ್ಲೂಕಿನ ಬಸಾಪುರ, ಕಿಡದಾಳ, ಹಲವರ್ತಿ ಗ್ರಾಮಗಳ ಸರ್ಕಾರಿ ಬಂಡಿ ರಸ್ತೆ, ಕಾಲುದಾರಿಗೆ ಬಲ್ಡೋಟ ಕಂಪನಿ ಕಾಂಪೌಂಡ್ ಕಟ್ಟಿ ಸಾರ್ವಜನಿಕ ಸಂಚಾರ ನರ್ಬಂಧಿಸಲಾಗಿದೆ. ಮುಂದಿನ ಹೊಲಗಳಿಗೆ ರೈತರು ಹೋಗಿ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ದವೀರಪ್ಪ ಸಮಾವೇಶದಲ್ಲಿ ನೆರೆದ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಬಲ್ಡೋಟ ಕಂಪನಿ 2007ರಲ್ಲಿ ತನ್ನ ಭೂದಾಹ ತೀರಿಸಿಕೊಳ್ಳಲು ಪಾರಂಪರಿಕ ಸಮುದಾಯದ ಸ್ವತ್ತೂ ಬಿಡದೆ 33 ಲಕ್ಷ ನೀಡಿ ಜಿಲ್ಲಾಧಿಕಾರಿಯಿಂದ ಬಸಾಪುರ ಸ.ನಂ.143ರ 44.35 ಎಕರೆ ಭೂ-ಮಂಜೂರಿ ಹೆಸರಿನಲ್ಲಿ ವಶಪಡಿಸಿಕೊಂಡಿದೆ. ಈ ಕೆರೆಯನ್ನು ಸರ್ಕಾರ ಮಾಡಿಕೊಟ್ಟಿಲ್ಲ. ಕೆರೆಗಳನ್ನು ನಮ್ಮ ಪೂರ್ವಿಕರು ಮುಂದಿನ ಪೀಳಿಗೆಯ ಭವಿಷ್ಯ ಕಾಪಾಡಲು ಈ ಸ್ವತ್ತು ಕೊಟ್ಟಿದ್ದಾರೆ. ಇದನ್ನು ಮಾರಾಟ ಮಾಡುವ ಹಕ್ಕು ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ಇಲ್ಲ. ಇಂಥ ನೈಸರ್ಗಿಕ ಜಲಮೂಲದ ಪಥ ಬದಲಾವಣೆ ಮಾಡುವುದು ಘೋರ ಅಪರಾಧವಾಗುತ್ತದೆ. ಬಲ್ಡೋಟ ಈ ಕೆರೆಯ ಹಳ್ಳದ ದಿಕ್ಕುಗಳನ್ನು ಬದಲಾಯಿಸಿ ಕೆರೆಗೆ ನೀರು ಬಂದು ಸೇರದಂತೆ ಮಾಡಿದಾಗಲೂ ಜಿಲ್ಲಾಧಿಕಾರಿ ಮೌನ ವಹಿಸಿದ್ದಾರೆ ಎಂದಾದರೆ ಅವರು ರೈತರು ಕಾನೂನು ಮುರಿಯಲು ಪ್ರೇರೇಪಿಸುತ್ತಿದ್ದಾರೆ ಎಂದು ತೋಚುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
50ನೇ ದಿನದ ಬಸಾಪುರ ಕೆರೆ ಹೋರಾಟದ ಸಮಾವೇಶದಲ್ಲಿ ಖ್ಯಾತ ಪತ್ರಕರ್ತ, ಪ್ರಗತಿಪರ ರೈತ ಲಕ್ಷ್ಮಣ ಹೂಗಾರ ಮಾತನಾಡಿ ಇಂಥ ಜೀವಸೂಕ್ಷ್ಮ ಗ್ರಾಮಸ್ಥರ ಸಂಪತ್ತನ್ನು ಕೊಪ್ಪಳದಲ್ಲಿ ಹೇಗೆ ಮಾರಾಟ ಮಾಡಿದರು ಎನ್ನುವುದೇ ಸೂಜಿಗವಾಗಿದೆ. ನಾನು ಎಲ್ಲಾ ಸ್ಥಾನಮಾನದ ರಾಜಕೀಯ ಪಕ್ಷದವರನ್ನು, ಧುರೀಣರನ್ನು ಸಂದರ್ಶನ ಮಾಡಿದ್ದೇನೆ. ಆದರೆ 44 ಎಕರೆ ಕೆರೆ ಮಾರಾಟ ಮಾಡಿ ಏನೂ ಗೊತ್ತಿಲ್ಲ ಎನ್ನುವಂತೆ ನಡೆದುಕೊಳ್ಳುವ ಅಧಿಕಾರಸ್ಥರ ಮೇಲೆ ಉನ್ನತ ಮಟ್ಟದ ಸ್ವಾಯತ್ತ ಸಂಸ್ಥೆಗಳಿಂದ ತನಿಖೆ ನಡೆಸಬೇಕು. ಅವರು ಎಷ್ಟೇ ದೊಡ್ಡವರಾದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ರಾಜಕಾರಣಿಗಳು ಕೊಪ್ಪಳ ಜನ ನಡೆಸುತ್ತಿರುವ ಮಾಲಿನ್ಯ ವಿರೋಧಿ ಹೋರಾಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿ ಆರೋಗ್ಯದ ದುಷ್ಪರಿಣಾಮ ಮಾಡುವ ಕಾರ್ಖಾನೆಗಳನ್ನು ಮುಚ್ಚಲಿ. ನಾನೂ ಈಗ ಪತ್ರಕರ್ತ ಅಲ್ಲ. ಇದು ನನ್ನ ಕುಟುಂಬದ ತವರು ಭೂಮಿ. ಈ ಜನ ನೋವು ಅನುಭವಿಸಿದರೆ ನನಗೂ ಅಷ್ಟೇ ನೋವಾಗುತ್ತದೆ. ನಾನು ಯಾವಾಗ ಕರೆದರೂ ಬಂದು ಬಂಬಲಿಸುತ್ತೇನೆ ಎಂದರು.
ಇನ್ನೊಬ್ಬ ರೈತ ಮುಖಂಡ, ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಅವರು ಜುಲೈ 21 ನರಗುಂದ ಬಂಡಾಯದ ದಿನ. ಅಷ್ಟರೊಳಗಾಗಿ ಕೆರೆಯನ್ನು ರೈತರ ಬಳಕೆಗೆ ಸರಕಾರ ಬಲ್ಡೋಟ ಕಂಪನಿಯ ಕಾಂಪೌಂಡ್ ತೆರವು ಮಾಡಿ ಕೆರೆ ಕೊಡದಿದ್ದರೆ ಅಂದು ರಾಜ್ಯ ಮಟ್ಟದ 'ಬಸಾಪುರ ಕೆರೆ ಅತಿಕ್ರಮಣ ತೆರವು' ಚಳವಳಿಗೆ ಕರೆ ನೀಡಿ 28 ಜಿಲ್ಲೆಗಳಿಂದ ರೈತರನ್ನು ಸೇರಿಸಿ ಕಾಂಪೌಂಡ್ ತೆರವು ಮಾಡುತ್ತೇವೆ. ಆಗ ಸರಕಾರ ತಡೆಯಲಿ ನೋಡೋಣ ಎಂದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಅತಿಥಿಯಾಗಿ ಮಾತನಾಡಿ ಕೆರೆ ಸಂರಕ್ಷಣೆ ಮಾಡಿಕೊಳ್ಳಲು 2007ರಿಂದಲೇ ಕಾನೂನಾತ್ಮಕ ಹಾಗೂ ಬೀದಿ ಹೋರಾಟ ಮಾಡುತ್ತಾ ಬಂದ ವಿಷಯ ಪ್ರಸ್ತಾಪಿಸಿದರು. ಕೆರೆ ಯಾವುದೇ ಕಾರಣದಿಂದಲೂ ಬಲ್ಡೋಟ ಕಂಪನಿ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಸುತ್ತಲ ಗ್ರಾಮಗಳಲ್ಲಿ ಕೆಲವರಿಗೆ ಆಶೆ ಹುಟ್ಟಿಸಿ ಕೆರೆ ತನ್ನದಾಗಿಸಿಕೊಳ್ಳುತ್ತೇನೆ ಎನ್ನುವ ಭ್ರಮೆಯಲ್ಲಿ ಕಂಪನಿ ಇದ್ದರೆ ಇಷ್ಟರಲ್ಲೇ ಈ ಕೆರೆ ಮಂಜೂರಿ ಮಾಡಿದ, ಕಾಂಪೌಂಡ್ ಕಟ್ಟಲು ಅನುಮತಿ ಕೊಟ್ಟ ಅಧಿಕಾರಿಗಳನ್ನು ತನಿಖೆಗೊಳಪಡಿಸುತ್ತೇವೆ ಎಂದರು.
ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದಕ್ಕೂ ಮೊದಲು ವಿದ್ಯುತ್ ವಿತರಣೆಯ ಪರವಾನಿಗೆಯನ್ನು ಟಾಟಾ ಪವರ್ ಕಂಪನಿಗೆ ಕೊಡುವ ಖಾಸಗೀಕರಣವನ್ನು ವಿರೋಧಿಸಿ, ಮುಂಗಾರು ವೈಫಲ್ಯವಾದ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಗಾಲ ಬಾಧಿತ ಜಿಲ್ಲೆಯೆಂದು ಘೋಷಿಸಬೇಕು, ಪಂಪ್ಸೆಟ್ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಮಾವೇಶದಲ್ಲಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಕೆ ನಾಯ್ಡು, (ಎಚ್.ಆರ್. ಬಸವರಾಜಪ್ಪ ಬಣದ ) ಜಿಲ್ಲಾಧ್ಯಕ್ಷ ಗಣೇಶರೆಡ್ಡಿ ಕನಕಗಿರಿ, ಮರಿಯಪ್ಪ ಸಾಲೋಣಿ, ಮೂಕಪ್ಪ ಮೇಸ್ತ್ರಿ ಬಸಾಪುರ, ನೂರಂದಪ್ಪ ಉಪ್ಪಿನ್, ಬಸವರಾಜ ಶೀಲವಂತರ, ಎಸ್.ಎ. ಗಫಾರ್, ಶರಣು ಗಡ್ಡಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಜಿಲ್ಲಾ ಕಾರ್ಯಾಧ್ಯಕ್ಷ ಕನಕಪ್ಪ ಪೂಜಾರ, ಜಿಲ್ಲಾ ಉಪಾಧ್ಯಕ್ಷರಾದ ಹನುಮಂತಪ್ಪ ಇರಕಲ್ಲಗಡಾ, ನಾಗಪ್ಪ ಕಿನ್ನಾಳ, ಜಿಲ್ಲಾ ಪ್ರ.ಕಾರ್ಯದರ್ಶಿ ವೆಂಕಟೇಶ ಗುನ್ನಾಳ, ಜಿಲ್ಲಾ ಖಜಾಂಚಿ ಬಸವರಾಜ ಹೂಗಾರ, ಶೇಖಪ್ಪ ಹಟ್ಟಿ, ದೇವಪ್ಪ ಮುದ್ಲಾಪೂರ, ಮಂಗಳೇಶ ರಾಠೋಡ್, ಯಂಕಪ್ಪ ಬಿಸನಹಳ್ಳಿ ಕಾಸನಕಂಡಿ, ನಾಗರಾಜ ಎಲಿಗಾರ, ಹನುಮಂತ ತಳವಾರ ಬಸಾಪುರ, ಹನುಮಂತಪ್ಪ ಜಂತ್ಲಿ ಇನ್ನೂ ಅನೇಕ ರೈತ ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್