ಕೋಳೂರು : ಪಿ.ಎಂ. ಕಿಸಾನ್ ಉತ್ಸವ ದಿವಸ್
ಕೋಳೂರು, 23 ಜೂನ್ (ಹಿ.ಸ.) : ಆ್ಯಂಕರ್ : ಕುರುಗೋಡು ತಾಲೂಕಿನ ಕೋಳೂರು ಹೋಬಳಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 23ನೇ ಕಂತು ಬಿಡುಗಡೆಯಾದ ಪ್ರಯುಕ್ತ ‘ಪಿ.ಎಂ. ಕಿಸಾನ್ ಉತ್ಸವ ದಿವಸ್’ ಹಾಗೂ ‘ಖೇತ್ ಬಚಾವೋ’ (ಭೂಮಿ ಉಳಿಸಿ) ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಪಶ್ಚಿಮ ಬ
ಕೋಳೂರು : ಪಿ.ಎಂ. ಕಿಸಾನ್ ಉತ್ಸವ ದಿವಸ್


ಕೋಳೂರು, 23 ಜೂನ್ (ಹಿ.ಸ.) :

ಆ್ಯಂಕರ್ : ಕುರುಗೋಡು ತಾಲೂಕಿನ ಕೋಳೂರು ಹೋಬಳಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 23ನೇ ಕಂತು ಬಿಡುಗಡೆಯಾದ ಪ್ರಯುಕ್ತ ‘ಪಿ.ಎಂ. ಕಿಸಾನ್ ಉತ್ಸವ ದಿವಸ್’ ಹಾಗೂ ‘ಖೇತ್ ಬಚಾವೋ’ (ಭೂಮಿ ಉಳಿಸಿ) ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 23ನೇ ಕಂತಿನ ಪಿ.ಎಂ. ಕಿಸಾನ್ ಹಣವನ್ನು ದೇಶದ ರೈತರ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಿದರು. ಈ ಐತಿಹಾಸಿಕ ಕ್ಷಣವನ್ನು ಹೋಬಳಿ ಮಟ್ಟದ ರೈತರು ನೇರವಾಗಿ ವೀಕ್ಷಿಸಲು ಕೃಷಿ ಇಲಾಖೆಯಿಂದ ವಿಶೇಷ ನೇರಪ್ರಸಾರ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಕೋಳೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ್ ಸಿಂಧಿಗೇರಿ ಅವರು ಮಾತನಾಡಿ, ಭೂಮಿ ಹೊಂದಿರುವ ಅರ್ಹ ರೈತರು ಕೃಷಿ ಚಟುವಟಿಕೆಗಳಿಗೆ ಉತ್ತಮ ಪರಿಕರಗಳನ್ನು ಬಳಸಿ, ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆಯಲು ಕೇಂದ್ರ ಸರ್ಕಾರದಿಂದ ವಾರ್ಷಿಕ 6,000 ರೂ. ಗಳ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಅನುದಾನವನ್ನು ಮೂರು ಕಂತುಗಳಲ್ಲಿ (ನಾಲ್ಕು ತಿಂಗಳಿಗೊಮ್ಮೆ) ನೀಡಲಾಗುತ್ತಿದ್ದು, ರೈತರು ಇದನ್ನು ಕೃಷಿ ಉದ್ದೇಶಗಳಿಗೇ ಬಳಸಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆಗಳಲ್ಲಿರುವವರು, ಶಾಸಕರು/ಸಂಸದರು/ನಗರಸಭೆ ಅಧ್ಯಕ್ಷರು ಹಾಗೂ ಅವರ ಕುಟುಂಬದ ಸದಸ್ಯರು, ನಿವೃತ್ತ ಸರ್ಕಾರಿ ನೌಕರರು, 10,000 ರೂ. ಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವ ವಯೋನಿವೃತ್ತ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ ಅನರ್ಹರಾಗಿರುತ್ತಾರೆ. ಪಡಿತರ ಚೀಟಿ ಆಧಾರದ ಮೇಲೆ ಕುಟುಂಬದ ಒಬ್ಬ ಅರ್ಹ ಫಲಾನುಭವಿಗೆ ಮಾತ್ರ ಈ ಯೋಜನೆ ಲಭ್ಯವಿರುತ್ತದೆ ಎಂದು ಕೃಷಿ ಅಧಿಕಾರಿ ಸ್ಪಷ್ಟಪಡಿಸಿದರು.

ಸಹಾಯಕ ಕೃಷಿ ಅಧಿಕಾರಿ ಡಾ.ಅರುಣ ಅವರು ಮಾತನಾಡಿ, ಈ ಬಾರಿ ಮುಂಗಾರು ಹಂಗಾಮಿನಲ್ಲಿ ಎಲ್ ನೀನೋ ಪ್ರಭಾವದಿಂದಾಗಿ ಮಳೆಯ ಕೊರತೆಯಾಗುವ ಸಾಧ್ಯತೆಯಿದೆ. ಹಾಗಾಗಿ ರೈತರು ದೀರ್ಘಾವಧಿ ಬೆಳೆಗಳ ಮೊರೆ ಹೋಗದೆ, ಅಲ್ಪಾವಧಿ ಬೆಳೆಗಳನ್ನು ಬೆಳೆಯಬೇಕು. ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಸಾಂಪ್ರದಾಯಿಕವಾಗಿ ನೀರು ನಿಲ್ಲಿಸಿ ಭತ್ತ ಬೆಳೆಯುವ ಬದಲು, ನೀರು ಉಳಿತಾಯ ಮಾಡುವ ಕೂರಿಗೆ ಭತ್ತ ಬಿತ್ತನೆ ಪದ್ಧತಿಯನ್ನು ಅಳವಡಿಸಿಕೊಳ್ಳಿ. ಇದರಿಂದ ಕೀಟ-ರೋಗ ಬಾಧೆ ತಗ್ಗುವುದರ ಜೊತೆಗೆ ಖರ್ಚು ಕಡಿಮೆಯಾಗಿ ಅಧಿಕ ಇಳುವರಿ ಸಿಗುತ್ತದೆ. ಈ ಪದ್ಧತಿಗೆ ಸೂಕ್ತವಾದ ಆರ್.ಎನ್.ಆರ್. ಭತ್ತದ ತಳಿ ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ಲಭ್ಯವಿದೆ ಎಂದರು.

ಜಿಲ್ಲೆಯಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ರೈತರು ಹಸಿರೆಲೆ ಗೊಬ್ಬರಗಳಾದ ಸೆಣಬು ಮತ್ತು ಡಯಂಚಾ ಬೀಜಗಳನ್ನು ಬಿತ್ತಿ ಮಡಿಕೆ ಹೊಡೆದು ಭೂಮಿಗೆ ಸೇರಿಸಬೇಕು. ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ಕುರಿ/ಕೋಳಿ ಗೊಬ್ಬರ ಹಾಗೂ ಜೈವಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುವ ಮೂಲಕ ಮಣ್ಣಿನ ಗುಣಮಟ್ಟ ಕಾಪಾಡಬಹುದು. ಸಾಂಪ್ರದಾಯಿಕ ಗೊಬ್ಬರಗಳ ಜೊತೆಗೆ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿ.ಎ.ಪಿ ಬಳಸುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದರು.

ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಲ್ಲಿ ದೊರೆಯುವ ಬೇವಿನ ಎಣ್ಣೆ, ಟ್ರೈಕೊಡರ್ಮಾ ಶಿಲೀಂದ್ರನಾಶಕಗಳಂತಹ ಜೈವಿಕ ಪೀಡೆನಾಶಕಗಳನ್ನು ಕೀಟ ನಿಯಂತ್ರಣಕ್ಕೆ ಬಳಸಲು ಅವರು ಕೋರಿದರು.

ಇದೇ ಸಂದರ್ಭದಲ್ಲಿ ಅರ್ಹ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಕೆ. ಚಂದ್ರಶೇಖರ್, ಆತ್ಮ ಯೋಜನೆಯ ಸಿಬ್ಬಂದಿ ರೇಣುಕಾರಾಧ್ಯ, ಕೋಳೂರು ಗ್ರಾಮದ ಮುಖಂಡರು ಹಾಗೂ ರೈತರಾದ ವಿರಾನಗೌಡ, ರಾಜಶೇಖರ ಗೌಡ, ಅಂಬರೀಶ, ಜುವಾರಿ ಫಾರ್ಮ್ ಹಬ್ನ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande