
ಬಾಗಲಕೋಟೆ, 23 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ವಿಧಿಸಲಾಗಿರುವ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ (ITMS) ದಂಡ ಪಾವತಿಸಲು ಸಾರ್ವಜನಿಕರು ನವನಗರದ ಸಂಚಾರಿ ಪೊಲೀಸ್ ಠಾಣೆ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ದಂಡ ಮೊತ್ತವನ್ನು ಪಾವತಿಸುತ್ತಿರುವ ದೃಶ್ಯ ಕಂಡುಬಂತು.
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ITMS ಕ್ಯಾಮೆರಾಗಳ ಮೂಲಕ ದಂಡ ವಿಧಿಸಲಾಗುತ್ತಿದ್ದು, ಬಾಕಿ ಉಳಿದಿರುವ ದಂಡವನ್ನು ಪಾವತಿಸಲು ಸೋಮವಾರ ಸೇರಿದಂತೆ ವಿವಿಧ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಮಾಲೀಕರು ಠಾಣೆಗೆ ಆಗಮಿಸುತ್ತಿದ್ದಾರೆ. ದಂಡ ಪಾವತಿಗಾಗಿ ಬೆಳಗ್ಗೆಯಿಂದಲೇ ಜನರು ಸಾಲಿನಲ್ಲಿ ನಿಂತು ತಮ್ಮ ಸರದಿ ಬರುವವರೆಗೆ ಕಾಯುತ್ತಿರುವುದು ಕಂಡುಬಂತು.
ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ITMS ವ್ಯವಸ್ಥೆಯಿಂದ ಸಂಚಾರ ನಿಯಮ ಉಲ್ಲಂಘನೆಗಳನ್ನು ಗುರುತಿಸಲಾಗುತ್ತಿದ್ದು, ಹೆಲ್ಮೆಟ್ ಧರಿಸದಿರುವುದು, ಸಿಗ್ನಲ್ ಉಲ್ಲಂಘನೆ, ಅತಿವೇಗದ ಚಾಲನೆ ಸೇರಿದಂತೆ ವಿವಿಧ ಪ್ರಕರಣಗಳಿಗೆ ದಂಡ ವಿಧಿಸಲಾಗುತ್ತಿದೆ.
ಬಾಕಿ ದಂಡ ಪಾವತಿಸುವಂತೆ ಪೊಲೀಸರು ವಾಹನ ಸವಾರರಿಗೆ ಸೂಚನೆ ನೀಡುತ್ತಿದ್ದಾರೆ.
ಠಾಣೆ ಆವರಣದಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ವ್ಯವಸ್ಥೆ ಕಲ್ಪಿಸಿ, ಸರತಿ ಸಾಲಿನ ಮೂಲಕ ದಂಡ ಪಾವತಿ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಂಡಿದ್ದಾರೆ. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ದಂಡ ತಪ್ಪಿಸಿಕೊಳ್ಳುವುದರ ಜೊತೆಗೆ ರಸ್ತೆ ಸುರಕ್ಷತೆ ಕಾಪಾಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande