
ಬಾಗಲಕೋಟೆ, 23 ಜೂನ್ (ಹಿ.ಸ.) :
ಆಂಕರ್ : ರಾಜ್ಯ ಸರ್ಕಾರದ ವಿದ್ಯುತ್ ಖಾಸಗೀಕರಣ ನೀತಿಯನ್ನು ವಿರೋಧಿಸಿ ಹಾಗೂ ಈ ನೀತಿಯನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣದಲ್ಲಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಬೆಳಗಾವಿ–ರಾಯಚೂರು ಹಾಗೂ ಧಾರವಾಡ–ಜಮಖಂಡಿ ಹೆದ್ದಾರಿಗಳಲ್ಲಿ ಸಂಚಾರ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನೂರಾರು ರೈತರು, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿ, ವಿದ್ಯುತ್ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ನೀಡುವ ಯಾವುದೇ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.
ವಿದ್ಯುತ್ ಸೇವೆ ಜನಸಾಮಾನ್ಯರು ಹಾಗೂ ರೈತರ ಜೀವನದ ಪ್ರಮುಖ ಆಧಾರವಾಗಿದ್ದು, ಖಾಸಗೀಕರಣದಿಂದ ಜನರಿಗೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಹೋರಾಟಗಾರರು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಕೂಡಲೇ ಖಾಸಗೀಕರಣ ನೀತಿಯಿಂದ ಹಿಂದೆ ಸರಿದು, ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ವಿದ್ಯುತ್ ಕ್ಷೇತ್ರವನ್ನು ಬಲಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ಪ್ರಯಾಣಿಕರು ತೊಂದರೆ ಅನುಭವಿಸಿದರು.
ನಂತರ ಪ್ರತಿಭಟನಾಕಾರರು ಲೋಕಾಪುರ ಉಪತಹಶೀಲ್ದಾರ್ ಬಿ.ಎಸ್. ರಂಗಣ್ಣವರ ಅವರಿಗೆ ಮನವಿ ಪತ್ರ ಸಲ್ಲಿಸಿ, ಸರ್ಕಾರದ ಗಮನಕ್ಕೆ ತಮ್ಮ ಬೇಡಿಕೆಗಳನ್ನು ತಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಅರುಣ ಕಾರಜೋಳ, ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ, ಮುಖಂಡರಾದ ನಾಗಪ್ಪ ಅಂಬಿ, ಶ್ರೀಶೈಲ ಚಿನ್ನಣ್ಣವರ, ರಾಜು ಯಡಹಳ್ಳಿ, ಲೋಕಣ್ಣ ಕತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande