ಮುಂಗಾರು ಸವಾಲು ಎದುರಿಸಲು ವಿಜಯಪುರ ಸಜ್ಜು : ಎಲ್ ನಿನೋ ಪರಿಣಾಮದ ನಡುವೆ ಕುಡಿಯುವ ನೀರು, ಕೃಷಿಗೆ ಆದ್ಯತೆ
ವಿಜಯಪುರ, 23 ಜೂನ್ (ಹಿ.ಸ.) : ಆಂಕರ್ : ಮುಂಗಾರು ಮಳೆಯ ಕೊರತೆಯ ಆತಂಕದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಜನಜೀವನ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸಜ್ಜಾಗಿದೆ ಸಚಿವ ಎಂ ಬಿ ಪಾಟೀಲ್ ತಿಳಿಸಿದರು. ಈ ಕುರಿತು ಶಾಸಕರ
Sabhe


ವಿಜಯಪುರ, 23 ಜೂನ್ (ಹಿ.ಸ.) :

ಆಂಕರ್ : ಮುಂಗಾರು ಮಳೆಯ ಕೊರತೆಯ ಆತಂಕದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಜನಜೀವನ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸಜ್ಜಾಗಿದೆ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.

ಈ ಕುರಿತು ಶಾಸಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಸಚಿವರು, ಜಿಲ್ಲೆಯ ಪ್ರಸ್ತುತ ಪರಿಸ್ಥಿತಿ, ನೀರಿನ ಲಭ್ಯತೆ, ಕೃಷಿ ಚಟುವಟಿಕೆಗಳು ಹಾಗೂ ಗ್ರಾಮೀಣ ಭಾಗದ ಅಗತ್ಯತೆಗಳ ಕುರಿತು ಸಮಗ್ರ ಚರ್ಚೆ ನಡೆಸಿದರು.

ಸಭೆಯಲ್ಲಿ ಜಿಲ್ಲೆಯ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಬಿತ್ತನೆ ಬೀಜಗಳ ಲಭ್ಯತೆ, ರಸಗೊಬ್ಬರ ಪೂರೈಕೆ, ಮೇವು ಸಂಗ್ರಹಣೆ ಸೇರಿದಂತೆ ಕೃಷಿ ಮತ್ತು ಗ್ರಾಮೀಣ ಬದುಕಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಅಲ್ಲದೇ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ, ಕೃಷ್ಣಾ ಮತ್ತು ಭೀಮಾ ನದಿಗಳ ನೀರಿನ ಹರಿವು, ವಿವಿಧ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.

ಎಲ್ ನಿನೋ ಪರಿಣಾಮದಿಂದಾಗಿ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗಿದೆ. ಜುಲೈ ಎರಡನೇ ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದ್ದು, ಅಲ್ಲಿಯವರೆಗೆ ಲಭ್ಯವಿರುವ ಜಲ ಸಂಪನ್ಮೂಲಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಜಲಾಶಯಗಳಲ್ಲಿರುವ ನೀರನ್ನು ಮೊದಲ ಆದ್ಯತೆಯಾಗಿ ಕುಡಿಯುವ ನೀರಿನ ಅಗತ್ಯಗಳಿಗೆ ಬಳಸಬೇಕು. ನಂತರ ಮಾತ್ರ ಇತರೆ ಅಗತ್ಯಗಳಿಗೆ ನೀರನ್ನು ಸೂಕ್ತ ಯೋಜನೆಯೊಂದಿಗೆ ಬಳಕೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.

ಜಿಲ್ಲೆಯಲ್ಲಿ ಯಾವುದೇ ಗ್ರಾಮ ಅಥವಾ ನಗರ ಪ್ರದೇಶದಲ್ಲಿ ಗೃಹಬಳಕೆಯ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಪಾಲಿಕೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿರುವ ಖಾಸಗಿ ಬೋರ್ವೆಲ್ಗಳು, ಬಾವಿಗಳು ಮತ್ತು ಇತರ ನೀರಿನ ಮೂಲಗಳನ್ನು ಬಳಸಿಕೊಂಡು ಅಗತ್ಯವಿರುವ ಪ್ರದೇಶಗಳಿಗೆ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮುಂಗಾರು ವಿಳಂಬವಾದರೂ ಜನರು, ರೈತರು ಹಾಗೂ ಜಾನುವಾರುಗಳ ಮೇಲೆ ಪರಿಣಾಮ ಬೀರದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಶಾಸಕರಾದ ರಾಜುಗೌಡ ಪಾಟೀಲ, ವಿಠ್ಠಲ ಕಟಕಧೋಂಡ, ಜಿಲ್ಲಾಧಿಕಾರಿ ಡಾ. ಆನಂದ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಋಷಿ ಆನಂದ್ ಹಾಗೂ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande