
ವಿಜಯಪುರ, 23 ಜೂನ್ (ಹಿ.ಸ.) :
ಆಂಕರ್ : ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣ ನಿರ್ಮಾಣದ ಉದ್ದೇಶದಿಂದ ಗಾನಯೋಗಿ ಸಂಘ ವಿಜಯಪುರ ವತಿಯಿಂದ ನಗರದ ಮಹಲ್ ಬಾಗಾಯತ ಬಡಾವಣೆಯ (ಬಿಡಿಎ) ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಅರಣ್ಯ ಇಲಾಖೆಯ ಅಮೂಲ್ಯ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ 50ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಟ್ಟರು.
ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಗಿಡ ನೆಡುವ ಕಾರ್ಯ ಮಹತ್ವದ್ದಾಗಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ನೆಡಲಾದ ಗಿಡಗಳ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಅಗತ್ಯ ಕಾಳಜಿ ವಹಿಸುವ ಸಂಕಲ್ಪವನ್ನು ಸಹ ಕೈಗೊಳ್ಳಲಾಯಿತು.
ಗಾನಯೋಗಿ ಸಂಘದ ವತಿಯಿಂದ ಆಯೋಜಿಸಲಾದ ಈ ಪರಿಸರ ಸ್ನೇಹಿ ಕಾರ್ಯಕ್ರಮವು ಹಸಿರು ವಿಜಯಪುರ ನಿರ್ಮಾಣದತ್ತ ಇಟ್ಟಿರುವ ಸಣ್ಣದಾದರೂ ಅರ್ಥಪೂರ್ಣ ಹೆಜ್ಜೆಯಾಗಿದೆ.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಎಲ್ಲ ಸಹಭಾಗಿಗಳಿಗೆ ಸಂಘದ ಪದಾಧಿಕಾರಿಗಳು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande