
ವಿಜಯಪುರ, 23 ಜೂನ್ (ಹಿ.ಸ.) :
ಆಂಕರ್ : ಮಾದಕದ್ರವ್ಯಗಳ ದುರ್ಬಳಕೆ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ವಿಜಯಪುರ ಜಿಲ್ಲಾ ಪೊಲೀಸ್ ವತಿಯಿಂದ “ಮಾದಕದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಅಂತಾರಾಷ್ಟ್ರೀಯ ದಿನ–2026” ಅಂಗವಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ವಿಜಯಪುರ ನಗರದ ಖ್ಯಾತ ಚಿಕ್ಕಮಕ್ಕಳ ತಜ್ಞರಾದ ಡಾ. ಬಿದರಿ ಅವರು ಜಂಟಿಯಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಮಾದಕದ್ರವ್ಯಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ವಿಶೇಷವಾಗಿ ಯುವಜನರು ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾಗದೆ ಶಿಕ್ಷಣ, ಕ್ರೀಡೆ ಹಾಗೂ ಸೃಜನಾತ್ಮಕ ಚಟುವಟಿಕೆಗಳತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಮಾದಕದ್ರವ್ಯ ಸೇವನೆ ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಾಗಿರದೆ, ಅದು ಇಡೀ ಸಮಾಜದ ಮೇಲೆ ಪರಿಣಾಮ ಬೀರುವ ಗಂಭೀರ ಸವಾಲಾಗಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಜಾಗೃತರಾಗುವ ಮೂಲಕ ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಹೇಳಿದರು.
ವಿಜಯಪುರ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡ ಈ ಅಭಿಯಾನದ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರಲ್ಲಿ ಮಾದಕದ್ರವ್ಯಗಳ ಅಪಾಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯಕರ ಜೀವನ ಶೈಲಿ ಹಾಗೂ ಸುರಕ್ಷಿತ ಸಮಾಜ ನಿರ್ಮಾಣದ ದಿಸೆಯಲ್ಲಿ ಈ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದೆ.
ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ “ಮಾದಕ ವಸ್ತುಗಳಿಗೆ ಬೇಡ, ಆರೋಗ್ಯಕರ ಜೀವನಕ್ಕೆ ಹೌದು” ಎಂಬ ಸಂದೇಶವನ್ನು ಸಾರಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande