
ಬಾಗಲಕೋಟೆ, 23 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಬೆಳಗಾವಿ–ರಾಯಚೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ.
ಗ್ರಾಮದಿಂದ ಹೆದ್ದಾರಿಗೆ ಸಂಪರ್ಕಿಸುವ ಅಂದಾಜು ಅರ್ಧ ಕಿಲೋಮೀಟರ್ ಉದ್ದದ ರಸ್ತೆ ಹಲವು ದಿನಗಳಿಂದ ದುರಸ್ತಿ ಕಾಣದೆ ಹಾಳಾಗಿದ್ದು, ರಸ್ತೆಯುದ್ದಕ್ಕೂ ಗುಂಡಿಗಳು ಹಾಗೂ ಕೆಂಪು ಮಣ್ಣಿನ ರಾಶಿ ಕಾಣಿಸುತ್ತಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಸಂಚರಿಸುವುದು ಅಪಾಯಕಾರಿಯಾಗಿ ಪರಿಣಮಿಸಿದೆ.
ವಿಶೇಷವಾಗಿ ಬೈಕ್ ಸವಾರರು ಈ ರಸ್ತೆಯಲ್ಲಿ ಸಂಚರಿಸುವ ವೇಳೆ ಎದುರು ಭಾಗದಿಂದ ಬೃಹತ್ ವಾಹನಗಳು ಬಂದಾಗ ಧೂಳಿನ ಸಮಸ್ಯೆ ತೀವ್ರವಾಗುತ್ತಿದೆ. ವಾಹನಗಳ ಸಂಚಾರದಿಂದ ಎದ್ದೇಳುವ ಕೆಂಪು ಧೂಳು ಸವಾರರ ಮೇಲೆ ಆವರಿಸುತ್ತಿದ್ದು, ಕಣ್ಣು, ಉಸಿರಾಟ ಸೇರಿದಂತೆ ಹಲವು ತೊಂದರೆಗಳನ್ನು ಉಂಟು ಮಾಡುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನರಿಗೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಆದರೆ ರಸ್ತೆಯ ದುಸ್ಥಿತಿಯಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುವುದರ ಜೊತೆಗೆ ಅಪಘಾತದ ಭೀತಿಯೂ ಹೆಚ್ಚಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಕಾಮಗಾರಿಗೆ ಮುಂದಾಗಬೇಕು. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಹದಗೆಟ್ಟಿರುವ ಈ ರಸ್ತೆಯನ್ನು ಶೀಘ್ರದಲ್ಲೇ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande