
ಬೆಂಗಳೂರು, 23 ಜೂನ್ (ಹಿ.ಸ.) :
ಆ್ಯಂಕರ್ : ಕೊಡಗು ಹಾಗೂ ಕಾವೇರಿ ರಕ್ಷಣಾ ವೇದಿಕೆ ವತಿಯಿಂದ ಕೊಡಗಿನ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ 16 ಅಂಶಗಳ ಹಕ್ಕೊತ್ತಾಯ ಪತ್ರವನ್ನು ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಲಾಯಿತು.
ಕೊಡಗಿನ ವಿಶಿಷ್ಟ ಭೌಗೋಳಿಕ, ಪರಿಸರ ಹಾಗೂ ಸಾಂಸ್ಕೃತಿಕ ಅಸ್ತಿತ್ವವನ್ನು ಕಾಪಾಡಲು ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ವೇದಿಕೆ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ, ಕರ್ನಾಟಕದ ಅತ್ಯಂತ ಚಿಕ್ಕ ಜಿಲ್ಲೆಗಳಲ್ಲಿ ಒಂದಾದ ಕೊಡಗು, ಕಾವೇರಿ ನದಿಯ ಪ್ರಮುಖ ಜಲಾನಯನ ಪ್ರದೇಶವಾಗಿದ್ದು, ದಕ್ಷಿಣ ಭಾರತದ ಎಂಟು ಕೋಟಿಗೂ ಹೆಚ್ಚು ಜನರ ಜೀವನಾಡಿಯಾಗಿದೆ ಎಂದು ಹೇಳಿದರು.
ಕಾಫಿ ಉತ್ಪಾದನೆ, ಸಶಸ್ತ್ರ ಪಡೆಗಳ ಸೇವೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕೊಡಗಿನ ಕೊಡುಗೆ ಅಪಾರವಾಗಿದ್ದರೂ ಜಿಲ್ಲೆ ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಅನಿಯಂತ್ರಿತ ನಗರೀಕರಣ ಹೆಚ್ಚುತ್ತಿದ್ದು, ಕರ್ನಾಟಕ ಭೂ ಕಂದಾಯ ಕಾಯ್ದೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಸ್ಥಳೀಯ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡಲು ಭೂಮಿ ಖರೀದಿಯ ಮೇಲೆ ನಿರ್ಬಂಧ ಹೇರಿ, ಭೂ ಮಾರಾಟವನ್ನು ಜಮ್ಮಾ ಹಿಡುವಳಿದಾರರು ಹಾಗೂ ಗುರುತಿಸಲಾದ ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಮನವಿ ಮಾಡಿದೆ.
ನಿಡುಂಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಗೃಹ ಮಂಡಳಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ 94 ಎಕರೆ ವಿಸ್ತೀರ್ಣದ ಯೋಜನೆಯನ್ನು ಮರುಪರಿಶೀಲನೆ ಮಾಡಬೇಕು. ಅದೇ ರೀತಿ ಪೊನ್ನಂಪೇಟೆಯನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಿಸುವ ಪ್ರಸ್ತಾವನೆಯನ್ನೂ ಸರ್ಕಾರ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಕೊಡಗಿನ ಜನರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪರಿಸರ ಸೇವೆಗಳಿಗೆ ಪರಿಹಾರ, ಕಾಫಿ ಮತ್ತು ಮೆಣಸಿಗೆ ಉತ್ತಮ ಬೆಲೆ ದೊರೆಯುವಂತೆ ವಿಶೇಷ ಕಾರ್ಯವಿಧಾನ ರೂಪಿಸುವಂತೆ ವೇದಿಕೆ ಆಗ್ರಹಿಸಿದೆ. ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಅರಣ್ಯ ಇಲಾಖೆ ಸಮಗ್ರ ಮಾರ್ಗಸೂಚಿ ರೂಪಿಸಬೇಕೆಂದು ತಿಳಿಸಿದೆ.
ಮೈಸೂರು-ಕುಶಾಲನಗರ ರೈಲು ಯೋಜನೆ ಸೇರಿದಂತೆ ಕೊಡಗಿನ ಮೂಲಕ ಹಾದುಹೋಗುವ ಬಹುಪಥ ಹೆದ್ದಾರಿ ಮತ್ತು ರೈಲು ಮಾರ್ಗ ಯೋಜನೆಗಳನ್ನು ಕೈಬಿಡಬೇಕು. ಜಿಲ್ಲೆಯಲ್ಲಿ ಯಾವುದೇ ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಅವಕಾಶ ನೀಡಬಾರದು ಹಾಗೂ 24 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು ಎಂದು ಹಕ್ಕೊತ್ತಾಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೊಡಗಿನಲ್ಲಿ ಪ್ರವಾಸೋದ್ಯಮದ ಒತ್ತಡ ಹೆಚ್ಚುತ್ತಿದ್ದು, ಕೇವಲ ಆರು ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಗೆ ವರ್ಷಕ್ಕೆ 40 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಲು ಸೂಕ್ತ ನೀತಿ ರೂಪಿಸಬೇಕು ಎಂದು ವೇದಿಕೆ ಸಲಹೆ ನೀಡಿದೆ.
ಬುಡಕಟ್ಟು ಸಮುದಾಯಗಳ ಆರೋಗ್ಯ ಸೇವೆ ಸುಧಾರಣೆ, ಅರಣ್ಯ ಇಲಾಖೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಹಕ್ಕೊತ್ತಾಯ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಎಲ್ಲ ಕ್ರಮಗಳನ್ನು ಕೇವಲ ಕೊಡಗು ಜಿಲ್ಲೆಗೆ ಮಾತ್ರವಲ್ಲದೆ ಕರ್ನಾಟಕದ ಇತರೆ ಮಲೆನಾಡು ಜಿಲ್ಲೆಗಳಿಗೂ ಅನ್ವಯಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.