ಅಕ್ಷರದಾಸೋಹ ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡಲು ಕರೆ
ಅಕ್ಷರದಾಸೋಹ ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡಲು ಕರೆ
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಸಿಯೂಟ ನಿರ್ವಹಣೆಯನ್ನು ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ವೀಕ್ಷಿಸಿದರು.


ಕೋಲಾರ, ೨೩ ಜೂನ್ (ಹಿ.ಸ) :

ಆ್ಯಂಕರ್ : ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಅಡಿ ಮಕ್ಕಳಿಗೆ ಶುಚಿ,ರುಚಿ,ಗುಣಮಟ್ಟದ ಊಟ ನೀಡುವ ಹೊಣೆ ಹೊತ್ತಿರುವ ಅಡುಗೆ ಸಿಬ್ಬಂದಿ ಅಡುಗೆ ಮನೆಯಲ್ಲಿ ಹಲ್ಲಿ,ಇಲಿ,ಜಿರಲೆಗಳು ಸುಳಿಯದಂತೆ ಎಚ್ಚರವಹಿಸಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಒತ್ತು ನೀಡಿ ಮಾತೃ ಪ್ರೇಮದೊಂದಿಗೆ ರುಚಿಕರ ಊಟ ಬಡಿಸಿ ಎಂದು ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಸೂಚನೆ ನೀಡಿದರು.

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಗೆ ದಿಢೀರ್ ಭೇಟಿ ನೀಡಿ, ಬಿಸಿಯೂಟ ನೀಡಿಕೆಯನ್ನು ವೀಕ್ಷಿಸಿದ ಅವರು, ಶಾಲೆಯಲ್ಲೇ ಊಟದ ರುಚಿ ನೋಡಿ ಗುಣಮಟ್ಟದ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.

ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳೇ ಎಂದು ಪರಿಗಣಿಸಿ, ಮನೆಯಲ್ಲಿ ನಿಮ್ಮ ಮಕ್ಕಳನ್ನು ಕಾಣುವಷ್ಟೇ ಪ್ರೀತಿಯಿಂದ ಅವರನ್ನೂ ಕಾಣಬೇಕು, ಅದು ನಿಮ್ಮ ಮಕ್ಕಳಿಗೂ ಶ್ರೇಯಸ್ಕರ ಎಂದು ಕಿವಿಮಾತು ಹೇಳಿ, ಶಿಕ್ಷಕರು ಬಿಸಿಯೂಟ ವಿತರಣೆ ಸಂದರ್ಭದಲ್ಲಿ ಉಸ್ತುವಾರಿ ವಹಿಸಬೇಕು ಎಂದರು.

ಅಡುಗೆ ಕೋಣೆ ಶುಭ್ರವಾಗಿದ್ದರೆ ಮಾತ್ರ ಅಡುಗೆಯಲ್ಲೂ ಶುಚಿತ್ವ ಕಾಪಾಡಲು ಸಹಕಾರಿಯಾಗುತ್ತದೆ ಎಂಬುದನ್ನು ಅರಿತು ಗಮನಹರಿಸಿ, ಪಾತ್ರೆಗಳ ಸ್ವಚ್ಚತೆ, ಶುದ್ದ ಕುಡಿಯುವ ನೀರು, ಗುಣಮಟ್ಟದ ತರಕಾರಿ ಬಳಕೆ ಉತ್ತಮ ಬಿಸಿಯೂಟ ತಯಾರಿಕೆಗೆ ಅತಿ ಮುಖ್ಯವಾಗಿದೆ, ಇವುಗಳು ಮಕ್ಕಳ ಆರೋಗ್ಯ ರಕ್ಷಣೆಗೂ ಸಹಕಾರಿಯಾಗಲಿದ್ದು, ಇದನ್ನು ಶಿಕ್ಷಕರು, ಮುಖ್ಯಶಿಕ್ಷಕರು ಸಹಾ ಗಮನಿಸುತ್ತಿರಬೇಕು. ಅಕ್ಷರದಾಸೋಹ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಯಾವುದೇ ಸಮಸ್ಯೆಗಳಿಲ್ಲದಂತೆ ನಿರ್ವಹಿಸಿಕೊಂಡು ಬರುತ್ತಿದ್ದೇವೆ, ಅಡುಗೆ ಸಾಮಗ್ರಿಗಳ ನಿರ್ವಹಣೆ, ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿ ಮಕ್ಕಳ ಹಾಜರಾತಿಗೆ ತಕ್ಕಂತೆ ಧಾನ್ಯಗಳ ಬಳಕೆ,ಸಂಗ್ರಹಣೆ ಇರಬೇಕು ಎಂದರು.

ಬಿಸಿಯೂಟದ ಅಡುಗೆ ಮನೆಯಲ್ಲಿ ಮತ್ತು ಸುತ್ತ ಸ್ವಚ್ಚತೆಗೆ ಒತ್ತು ನೀಡಿ, ಸೊಳ್ಳೆಗಳ ಉತ್ಪತ್ತಿ ತಡೆಗೆ ಕ್ರಮವಹಿಸಿ, ಮಕ್ಕಳಿಗೆ ನೀಡುವ ಊಟದಲ್ಲಿ ಸ್ವಚ್ಚತೆ ಇಲ್ಲವಾದಲ್ಲಿ ಸಾಂಕ್ರಾಮಿಕ ರೋಗಗಳು ಬರುವ ಭೀತಿ ಇರುವುದರಿಂದ ಅಡುಗೆ ಸಿಬ್ಬಂದಿ ಗಮನಹರಿಸಿ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಸುಗುಣಾ, ಶ್ವೇತಾ, ಶ್ರೀನಿವಾಸಲು, ರಮಾದೇವಿ, ಚೈತ್ರಾ ಮತ್ತಿತರರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande