
ವಿಜಯಪುರ, 23 ಜೂನ್ (ಹಿ.ಸ.) :
ಆಂಕರ್ : ಬಸವತತ್ವದ ದಿವ್ಯ ಚೇತನದಲ್ಲಿ ಅರಳಿದ ಶರಣಶ್ರೇಷ್ಠೆ, ಗಡಿನಾಡಿನ ಕನ್ನಡದ ಸಿಂಹಿಣಿ ಎಂದೇ ಖ್ಯಾತರಾದ ಜಯದೇವಿ ತಾಯಿ ಲಿಗಾಡೆಯವರ ಜನ್ಮದಿನದ ಅಂಗವಾಗಿ ಅವರನ್ನು ಸ್ಮರಿಸಿ ಗೌರವಪೂರ್ವಕ ನಮನಗಳನ್ನು ಸಲ್ಲಿಸಲಾಯಿತು ಎಂದು ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಪ್ರಕಟಣೆ ಮೂಲಕ ತಿಳಿಸಿದರು.
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿದರೂ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ನಾಡಿನ ಅಸ್ಮಿತೆಯನ್ನೇ ತಮ್ಮ ಬದುಕಿನ ಧ್ಯೇಯವನ್ನಾಗಿಸಿಕೊಂಡಿದ್ದ ಜಯದೇವಿ ತಾಯಿ ಲಿಗಾಡೆಯವರು ಕನ್ನಡದ ಪರವಾಗಿ ಅಚಲವಾಗಿ ನಿಂತು ಅಪಾರ ಸೇವೆ ಸಲ್ಲಿಸಿದರು. ಗಡಿಭಾಗದಲ್ಲಿ ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ಅವರು ನಡೆಸಿದ ಹೋರಾಟ ಕನ್ನಡಿಗರ ಮನದಲ್ಲಿ ಎಂದಿಗೂ ಅಚ್ಚಳಿಯದೆ ಉಳಿದಿದೆ.
ಸ್ತ್ರೀ ಶಿಕ್ಷಣದ ಮಹತ್ವವನ್ನು ಅರಿತಿದ್ದ ಅವರು ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಿದರು. ಮಹಾರಾಷ್ಟ್ರ, ಹೈದರಾಬಾದ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಪ್ರೇರಣೆಯಾಗುವ ಮೂಲಕ ಸಾವಿರಾರು ಹೆಣ್ಣುಮಕ್ಕಳಿಗೆ ಶಿಕ್ಷಣದ ಬೆಳಕು ನೀಡಿದರು. ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಅವರ ಕಾರ್ಯ ನಿರಂತರವಾಗಿತ್ತು.
ಕರ್ನಾಟಕ ಏಕೀಕರಣ ಚಳವಳಿಯ ಸಂದರ್ಭದಲ್ಲಿ ಕನ್ನಡದ ಪರವಾಗಿ ಧೈರ್ಯದಿಂದ ಧ್ವನಿ ಎತ್ತಿದ ಜಯದೇವಿ ತಾಯಿ ಲಿಗಾಡೆಯವರು ಭಾಷೆ, ಸಂಸ್ಕೃತಿ ಮತ್ತು ನಾಡಿನ ಗೌರವಕ್ಕಾಗಿ ಹೋರಾಡಿದ ಅಪರೂಪದ ವ್ಯಕ್ತಿತ್ವವಾಗಿದ್ದರು. ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು.
ಅವರ ಹೋರಾಟದ ಮನೋಭಾವ, ಶಿಕ್ಷಣ ಕ್ಷೇತ್ರದ ಕೊಡುಗೆ ಹಾಗೂ ಕನ್ನಡ ನಾಡಿನ ಮೇಲಿನ ಅಪಾರ ಅಭಿಮಾನ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಜಯದೇವಿ ತಾಯಿ ಲಿಗಾಡೆಯವರ ಸೇವಾಮಯ ಬದುಕು ಸಾವಿರಾರು ಮಹಿಳೆಯರಿಗೆ ಹಾಗೂ ಕನ್ನಡಾಭಿಮಾನಿಗಳಿಗೆ ಸದಾ ಪ್ರೇರಣೆಯ ಜ್ಯೋತಿಯಾಗಿ ಬೆಳಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande