
ಬೆಂಗಳೂರು, 22 ಜೂನ್ (ಹಿ.ಸ.) :
ಆ್ಯಂಕರ್ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅವಕಾಶಗಳನ್ನು ಕಲ್ಪಿಸುವ ಸ್ಕೌಟ್-2. ಕಾರ್ಯಕ್ರಮವನ್ನು ಕೇವಲ ಮೂರು ವರ್ಷಗಳಿಗೆ ಸೀಮಿತಗೊಳಿಸದೆ, ಇನ್ನಷ್ಟು ಅವಧಿಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಹಾಗೂ ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಆಯೋಜಿಸಿದ್ದ ಅತ್ಯುತ್ತಮ ಪ್ರತಿಭಾವಂತ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ರೂಪಿಸಲಾದ ಸ್ಕೌಟ್-2.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಭೇಟಿ ಮಾಡಿರುವುದು ಸಂತೋಷದ ಸಂಗತಿ ಎಂದು ಹೇಳಿದ ಅವರು, “ಕರ್ನಾಟಕ ಎಂದರೆ ಬೆಂಗಳೂರು ಮಾತ್ರವಲ್ಲ. ಚಾಮರಾಜನಗರದಿಂದ ಬೀದರ್ವರೆಗೆ ಎಲ್ಲ ಜಿಲ್ಲೆಗಳ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ದೊರಕಬೇಕು. ಈ ಜವಾಬ್ದಾರಿಯನ್ನು ವಿಶ್ವವಿದ್ಯಾಲಯಗಳು ಹೊತ್ತುಕೊಂಡಿರುವುದು ಶ್ಲಾಘನೀಯ” ಎಂದರು.
ಬ್ರಿಟಿಷ್ ಕೌನ್ಸಿಲ್ ಜೊತೆಗಿನ ಸಹಯೋಗವನ್ನು ಉಲ್ಲೇಖಿಸಿದ ಅವರು, ಜ್ಞಾನ ಮತ್ತು ಆಲೋಚನೆಗಳ ವಿನಿಮಯಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಿದ್ದು, ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸಿರುವ ಬ್ರಿಟಿಷ್ ಕೌನ್ಸಿಲ್ಗೆ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕ ಪ್ರತಿಭೆಗಳ ತಾಣ
“ಕರ್ನಾಟಕ ಮತ್ತು ಬೆಂಗಳೂರು ಇಂದು ಪ್ರತಿಭೆಗಳ ಕೇಂದ್ರವಾಗಿವೆ. ಇಡೀ ವಿಶ್ವ ಕರ್ನಾಟಕದತ್ತ ಗಮನ ಹರಿಸಿದೆ. ಕರ್ನಾಟಕದ ಮೂಲಕವೇ ಭಾರತವನ್ನು ನೋಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಾವು ಹಿಂದುಳಿದವರು ಎಂಬ ಭಾವನೆ ಬೆಳೆಸಿಕೊಳ್ಳಬಾರದು. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾಹಿತಿ ನಿಮ್ಮ ಬೆರಳ ತುದಿಯಲ್ಲಿದೆ. ಆದ್ದರಿಂದ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ನಿಮ್ಮಲ್ಲಿದೆ” ಎಂದು ಹೇಳಿದರು.
ವಿದ್ಯಾರ್ಥಿಗಳು ದೂರದೃಷ್ಟಿಯೊಂದಿಗೆ ಚಿಂತನೆ ನಡೆಸಬೇಕು. ಅವರಿಂದ ರಾಜ್ಯ ಮತ್ತು ದೇಶಕ್ಕೆ ದೊಡ್ಡ ನಿರೀಕ್ಷೆಗಳಿವೆ ಎಂದು ಅವರು ತಿಳಿಸಿದರು.
ವಿದೇಶದಲ್ಲಿ ಕಲಿಯಿರಿ, ಭಾರತಕ್ಕೆ ಮರಳಿ ಸೇವೆ ಮಾಡಿ
“ನಮ್ಮ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಈ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸಲು ಸಿದ್ಧವಾಗಿವೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಅವಕಾಶ ಸಿಗಬೇಕು. ಬ್ರಿಟನ್ಗೆ ಹೋಗಿ ಶಿಕ್ಷಣ ಪಡೆಯಿರಿ. ಆದರೆ ಅಲ್ಲಿಯೇ ನೆಲೆಸಬೇಡಿ. ನಿಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಭಾರತಕ್ಕೆ ಮರಳಿ ಬಂದು ಇಲ್ಲಿ ಕೆಲಸ ಮಾಡಿ, ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ” ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಇನ್ನಷ್ಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಬೇಕು. ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಹೇಳಿದರು.
ಉದ್ಯೋಗದಾತರಾಗುವ ಗುರಿ ಹೊಂದಿ
ಯುವಜನತೆಗೆ ಸಲಹೆ ನೀಡಿದ ಮುಖ್ಯಮಂತ್ರಿ, “ಇದು ಕೇವಲ ಪದವಿ ಪಡೆಯುವ ಕಾರ್ಯಕ್ರಮವಲ್ಲ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಅವರನ್ನು ತಮ್ಮ ಕ್ಷೇತ್ರಗಳಲ್ಲಿ ನಾಯಕರನ್ನಾಗಿ ರೂಪಿಸುವ ಪ್ರಯತ್ನವಾಗಿದೆ. ಕನಸು ಕಾಣುವುದು ಮಾತ್ರವಲ್ಲ, ಅದನ್ನು ನನಸಾಗಿಸಲು ಬದ್ಧತೆ ಮತ್ತು ಶಿಸ್ತುಬದ್ಧ ಪರಿಶ್ರಮ ಅಗತ್ಯ. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಹೋದರೂ ನಿಮ್ಮ ಮೂಲವನ್ನು ಮರೆಯಬಾರದು” ಎಂದರು.
“ಉದ್ಯೋಗಕ್ಕಾಗಿ ಕಾಯುವವರಾಗುವುದಕ್ಕಿಂತ, ಇತರರಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗುವುದು ನಿಮ್ಮ ಗುರಿಯಾಗಬೇಕು. ಅದೇ ನಿಜವಾದ ಯಶಸ್ಸಿನ ದಾರಿ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.