ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸ್ ದರ ಹೆಚ್ಚಳ ಇಲ್ಲ
ಬೆಂಗಳೂರು, 22 ಜೂನ್ (ಹಿ.ಸ.) : ಆ್ಯಂಕರ್ : ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸ್ ದರವನ್ನು ಹೆಚ್ಚಿಸಲಾಗಿದೆ ಎಂಬ ಸುದ್ದಿಗಳು ವಾಸ್ತವಕ್ಕೆ ದೂರವಾಗಿದ್ದು, ಸಾಮಾನ್ಯ ಮಾಸಿಕ ಪಾಸ್ನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸ್ಪಷ್ಟಪಡಿಸಿದೆ. ಸಂಸ್ಥೆ ಬ
ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸ್ ದರ ಹೆಚ್ಚಳ ಇಲ್ಲ


ಬೆಂಗಳೂರು, 22 ಜೂನ್ (ಹಿ.ಸ.) :

ಆ್ಯಂಕರ್ : ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸ್ ದರವನ್ನು ಹೆಚ್ಚಿಸಲಾಗಿದೆ ಎಂಬ ಸುದ್ದಿಗಳು ವಾಸ್ತವಕ್ಕೆ ದೂರವಾಗಿದ್ದು, ಸಾಮಾನ್ಯ ಮಾಸಿಕ ಪಾಸ್ನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸ್ಪಷ್ಟಪಡಿಸಿದೆ.

ಸಂಸ್ಥೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ರಾಜ್ಯ ಸರ್ಕಾರವು ಕಾಲಕಾಲಕ್ಕೆ ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಬಿಎಂಟಿಸಿಯ ಕಾರ್ಯಾಚರಣೆ ವ್ಯಾಪ್ತಿಯನ್ನು ವಿಸ್ತರಿಸುತ್ತ ಬಂದಿದೆ. 2026ರ ಜನವರಿ 5ರ ಅಧಿಸೂಚನೆಯಂತೆ, ಬಿಎಂಟಿಸಿ ಕಾರ್ಯಾಚರಣೆ ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಿಂದ 40 ಕಿಲೋಮೀಟರ್ವರೆಗೆ ವಿಸ್ತರಿಸಲಾಗಿದೆ.

ಈ ನಿರ್ಧಾರದಿಂದ ನಗರ ಕೇಂದ್ರದಿಂದ ಈವರೆಗೆ ಸುಮಾರು 40–42 ಕಿ.ಮೀ.ವರೆಗೆ ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದ ಬಸ್ ಸೇವೆಗಳನ್ನು 65–70 ಕಿ.ಮೀ.ವರೆಗೆ ವಿಸ್ತರಿಸಲು ಅವಕಾಶ ದೊರೆತಿದೆ. ಇದರ ಫಲವಾಗಿ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ ಹಾಗೂ ಮಾಲೂರು ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಹಲವು ಪ್ರಮುಖ ನಗರ ಮತ್ತು ತಾಲ್ಲೂಕು ಕೇಂದ್ರಗಳಿಗೆ ಬಿಎಂಟಿಸಿ ಸೇವೆ ವಿಸ್ತರಿಸಲಾಗಿದೆ.

ಸೀಮಿತ ಹಾಗೂ ವಿಸ್ತಾರ ವ್ಯಾಪ್ತಿ ವಿಭಾಗ

ಹೊಸ ಕಾರ್ಯಾಚರಣೆ ವ್ಯವಸ್ಥೆಯಡಿ ನಗರ ಕೇಂದ್ರದಿಂದ 40 ಕಿ.ಮೀ.ವರೆಗಿನ ಪ್ರದೇಶವನ್ನು ‘ಸೀಮಿತ ವ್ಯಾಪ್ತಿ’ ಹಾಗೂ ಅದರಾಚೆಗಿನ ಪ್ರದೇಶವನ್ನು ‘ವಿಸ್ತಾರ ವ್ಯಾಪ್ತಿ’ ಎಂದು ವರ್ಗೀಕರಿಸಲಾಗಿದೆ.

ಸೀಮಿತ ವ್ಯಾಪ್ತಿಯಲ್ಲಿ ಸಂಚರಿಸುವ ಪ್ರಯಾಣಿಕರಿಗಾಗಿ ಈಗಾಗಲೇ ಜಾರಿಯಲ್ಲಿರುವ ಎಲ್ಲಾ ಪಾಸ್ಗಳನ್ನು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಲಾಗಿದೆ. ಆದರೆ, ಹೊಸದಾಗಿ ವಿಸ್ತರಿಸಿರುವ ಮಾರ್ಗಗಳಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ 2026ರ ಜೂನ್ 2ರಿಂದ ‘ಸಾಮಾನ್ಯ ವಿಸ್ತಾರ’ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸ್ಗಳನ್ನು ಪರಿಚಯಿಸಲಾಗಿದೆ.

ಪಾಸ್ ದರಗಳು ಮತ್ತು ಮಾರಾಟದ ವಿವರ

ಜೂನ್ 2ರಿಂದ ಜೂನ್ 21ರವರೆಗೆ ಮಾರಾಟವಾದ ಪಾಸ್ಗಳ ವಿವರ ಹೀಗಿದೆ:

ಸಾಮಾನ್ಯ ವಿಸ್ತಾರ ದೈನಿಕ ಪಾಸ್ (₹120) – 29

ಸಾಮಾನ್ಯ ವಿಸ್ತಾರ ಸಾಪ್ತಾಹಿಕ ಪಾಸ್ (₹550) – 3

ಸಾಮಾನ್ಯ ಮಾಸಿಕ ಪಾಸ್ (₹1,200) – 60,400

ಸಾಮಾನ್ಯ ವಿಸ್ತಾರ ಮಾಸಿಕ ಪಾಸ್ (₹1,500) – 160

ಈ ಅಂಕಿ-ಅಂಶಗಳು ಸಾಮಾನ್ಯ ಮಾಸಿಕ ಪಾಸ್ ಅನ್ನು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಎಂದಿನಂತೆ ಬಳಸುತ್ತಿರುವುದನ್ನು ತೋರಿಸುತ್ತವೆ. ಅದರ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ ಎಂದು ಬಿಎಂಟಿಸಿ ತಿಳಿಸಿದೆ.

ವದಂತಿಗಳಿಗೆ ಸ್ಪಷ್ಟನೆ

ಸಾಮಾನ್ಯ ಮಾಸಿಕ ಪಾಸ್ ದರವನ್ನು ಹೆಚ್ಚಿಸಲಾಗಿದೆ ಎಂಬ ಮಾಹಿತಿ ಸಂಪೂರ್ಣ ತಪ್ಪಾಗಿದೆ. ಪ್ರತಿನಿತ್ಯ ಸೀಮಿತ ವ್ಯಾಪ್ತಿಯಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರ ಮೇಲೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳದಂತೆ ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ಪರಿಚಯಿಸಿರುವ ‘ಸಾಮಾನ್ಯ ವಿಸ್ತಾರ’ ಪಾಸ್ಗಳು ಕೇವಲ ವಿಸ್ತಾರ ವ್ಯಾಪ್ತಿಯ ಮಾರ್ಗಗಳಲ್ಲಿ ಪ್ರಯಾಣಿಸುವವರಿಗಾಗಿ ಮಾತ್ರ ಜಾರಿಗೊಳಿಸಲಾಗಿದೆ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande