ಗ್ಯಾರೆಂಟಿ ಸಮಿತಿಗಳು ಗಂಜಿ ಕೇಂದ್ರಗಳಾಗಿವೆ : ಅಶೋಕ್
ಬೆಂಗಳೂರು, 22 ಜೂನ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಗ್ಯಾರೆಂಟಿ ಸಮಿತಿಗಳ ವಿರುದ್ಧ ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಆರ್.ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಗ್ಯಾರೆಂಟಿ ಸ
ಅಶೋಕ


ಬೆಂಗಳೂರು, 22 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಗ್ಯಾರೆಂಟಿ ಸಮಿತಿಗಳ ವಿರುದ್ಧ ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಆರ್.ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಗ್ಯಾರೆಂಟಿ ಸಮಿತಿಗಳು ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಂಗ್ರೆಸ್ನ ಅತೃಪ್ತ ನಾಯಕರು ಹಾಗೂ ಕಾರ್ಯಕರ್ತರನ್ನು ಸಾಕುವ “ಗಂಜಿ ಕೇಂದ್ರ”ಗಳಾಗಿ ಮಾರ್ಪಟ್ಟಿವೆ ಎಂದು ಆರೋಪಿಸಿದ್ದಾರೆ.

ಸತ್ತವರ ಹೆಸರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿರುವ ಹಗರಣ ಬೆಳಕಿಗೆ ಬಂದಿರುವ ನಡುವೆಯೇ, ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಹೊಸ ಗ್ಯಾರೆಂಟಿ ಸಮಿತಿಗಳನ್ನು ರಚಿಸಿ ರಾಜ್ಯದ ಖಜಾನೆಗೆ ಮತ್ತಷ್ಟು ಹೊರೆ ಹಾಕಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಅವರು ಟೀಕಿಸಿದ್ದಾರೆ.

ರಾಜ್ಯದಲ್ಲಿ ಹಣದ ಕೊರತೆಯಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಪಠ್ಯಪುಸ್ತಕ ಮತ್ತು ಸಮವಸ್ತ್ರಕ್ಕಾಗಿ ಕಾಯುತ್ತಿದ್ದಾರೆ. ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಪೌಷ್ಟಿಕ ಆಹಾರ ಯೋಜನೆಗಳಿಗೆ ಸಮರ್ಪಕ ಅನುದಾನವಿಲ್ಲ. ರಾಗಿ ಬೆಳೆದ ರೈತರು ಬೆಂಬಲ ಬೆಲೆಯ ಬಾಕಿ ಹಣಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಶೋಕ್ ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಹಣವನ್ನು ಪಕ್ಷದ ಕಾರ್ಯಕರ್ತರು ಹಾಗೂ ಅತೃಪ್ತ ನಾಯಕರಿಗೆ ಹುದ್ದೆ ಮತ್ತು ಸೌಲಭ್ಯಗಳನ್ನು ನೀಡಲು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಆರೋಪಿಸಿದ್ದಾರೆ.

ಹೊಸ ಗ್ಯಾರೆಂಟಿ ಸಮಿತಿಗಳ ರಚನೆ ಮಾಡುವುದನ್ನು ಬಿಟ್ಟು, ಸರ್ಕಾರಕ್ಕೆ ನಾಚಿಕೆ ಮತ್ತು ಜವಾಬ್ದಾರಿ ಇದ್ದರೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗ್ಯಾರೆಂಟಿ ಸಮಿತಿಗಳನ್ನು ಕೂಡಲೇ ವಿಸರ್ಜಿಸಬೇಕು. ಅಲ್ಲದೆ ಈವರೆಗೆ ನೀಡಿರುವ ಸಂಬಳ ಮತ್ತು ಸವಲತ್ತುಗಳನ್ನು ವಾಪಸ್ ಪಡೆಯಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande