ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ : ಐಜಿಪಿ ಸಂದೀಪ್ ಪಾಟೀಲ್
ಗದಗ, 22 ಜೂನ್ (ಹಿ.ಸ.) : ಆ್ಯಂಕರ್ : ಮಾದಕ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸುವುದು ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರು ಹಾಗೂ ಯುವಜನತೆ ಕೈಜೋಡಿಸಿದಾಗ ಮಾತ್ರ ಇದನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯ, ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಅವರು
ಫೋಟೋ


ಗದಗ, 22 ಜೂನ್ (ಹಿ.ಸ.) :

ಆ್ಯಂಕರ್ : ಮಾದಕ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸುವುದು ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರು ಹಾಗೂ ಯುವಜನತೆ ಕೈಜೋಡಿಸಿದಾಗ ಮಾತ್ರ ಇದನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯ, ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಅವರು ತಿಳಿಸಿದರು.

ನಗರದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಮತ್ತು ಕಳ್ಳಸಾಗಣೆ ವಿರೋಧಿ ದಿನಾಚರಣೆಯ ಅಂಗವಾಗಿ, ಗದಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾದಕ ವ್ಯಸನ ಮುಕ್ತ ಗದಗ ವಾಕಥಾನ್ 2026 ಕಾರ್ಯಕ್ರಮ ಕುರಿತು ಆಟೋ ಮೂಲಕ ಜನ ಜಾಗೃತಿ ವಾಕಥಾನ್ 2026 ಕಾರ್ಯಕ್ರಮಕ್ಕೆ ಗಾಂಧಿ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮುಕ್ತ ಗದಗ ವಾಕಾಥಾನ್-2026 ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಐಜಿಪಿ ಸಂದೀಪ ಪಾಟೀಲ್ ಚಾಲನೆ ನೀಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲೂ ಡಾಕ್ಟರ್, ಇಂಜಿನಿಯರ್, ಪೊಲೀಸ್ ಅಥವಾ ಕ್ರೀಡಾಪಟು ಆಗಬೇಕೆಂಬ ದೊಡ್ಡ ಕನಸುಗಳಿರುತ್ತವೆ. ಆದರೆ, ಒಮ್ಮೆ ಡ್ರಗ್ಸ್ನಂತಹ ದುಶ್ಚಟಗಳಿಗೆ ಬಲಿಯಾದರೆ ಆ ಎಲ್ಲಾ ಕನಸುಗಳು ನುಚ್ಚುನೂರಾಗುತ್ತವೆ. ಹೀಗಾಗಿ ಯುವಜನತೆ ಯಾವುದೇ ಕಾರಣಕ್ಕೂ ಇಂತಹ ವ್ಯಸನಗಳಿಗೆ ಒಳಗಾಗದೆ 'ಮಾದಕ ವಸ್ತುವಿಗೆ ಇಲ್ಲ ಎನ್ನಿ' (Say No to Drugs) ಎಂಬ ಪಣವನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು, ಎಂದರು.

ಜೂನ್ 26 ರಂದು ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಲಾಖೆಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಾರ ಪೂರ್ತಿ ವಿಶೇಷ ಅಭಿಯಾನಗಳನ್ನು ಹಮ್ಮಿಕೊಂಡಿದೆ. ಡ್ರಗ್ಸ್ ಕಾಯ್ದೆಯಡಿ ಕೇವಲ ಮಾರಾಟಗಾರರಷ್ಟೇ ಅಲ್ಲದೆ, ಮಾದಕ ವಸ್ತುಗಳನ್ನು ಸೇವಿಸುವ ಗ್ರಾಹಕರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯುವಕರು ಸ್ನೇಹಿತರ ಒತ್ತಡಕ್ಕೆ ಮಣಿದು ಇಂತಹ ಚಟಗಳಿಗೆ ದಾಸರಾಗಬಾರದು. ಸಮಾಜದಲ್ಲಿ ಡ್ರಗ್ಸ್ ಬೇಡಿಕೆ ಕಡಿಮೆಯಾದಾಗ, ಅದರ ಮಾರಾಟವೂ ತಾನಾಗಿಯೇ ನಿಲ್ಲುತ್ತದೆ, ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ಒಂದು ವರ್ಷದಲ್ಲಿ ಗದಗ ಜಿಲ್ಲಾ ಪೊಲೀಸರು ಮಾದಕ ವಸ್ತುಗಳ ತಡೆಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 27 ಪ್ರಕರಣಗಳನ್ನು ದಾಖಲಿಸಿ, 52 ಆರೋಪಿಗಳನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೆ, ಇಡೀ ಉತ್ತರ ವಲಯದ 5 ಜಿಲ್ಲೆಗಳಲ್ಲೇ (ಬೆಳಗಾವಿ, ವಿಜಯಪುರ, ಗದಗ, ಧಾರವಾಡ ಮತ್ತು ಬಾಗಲಕೋಟೆ) ಪ್ರಥಮ ಬಾರಿಗೆ ಗದಗ ಜಿಲ್ಲೆಯಲ್ಲಿ 'ಪಿಟ್ ಎನ್ಡಿಪಿಎಸ್' ಕಾಯ್ದೆಯಡಿ ಅಭ್ಯಾಸ ಬಲ ಉಳ್ಳ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿ, ಒಂದು ವರ್ಷದವರೆಗೆ ಜೈಲಿಗಟ್ಟುವ ಕಠಿಣ ಕ್ರಮ ಜರುಗಿಸಲಾಗಿದೆ ಎಂದು ಐಜಿಪಿ ಅವರು ಗದಗ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಸಾರ್ವಜನಿಕರು ತಮ್ಮ ಸುತ್ತಮುತ್ತ ಎಲ್ಲಾದರೂ ಮಾದಕ ವಸ್ತುಗಳ ಮಾರಾಟ, ಸೇವನೆ ಅಥವಾ ಗಾಂಜಾ ಬೆಳೆಯುವಿಕೆ ಕಂಡುಬಂದಲ್ಲಿ ತಕ್ಷಣವೇ ಗದಗ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ ಅವರು, ನಶೆ ಮುಕ್ತ ಕರ್ನಾಟಕ ನಿರ್ಮಾಣದ ಈ ಮಹತ್ಕಾರ್ಯದಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮದವರು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ ಮಾತನಾಡಿ ಮಾದಕ ವಸ್ತುಗಳ ದುರ್ಬಳಕೆಯು ಕೇವಲ ಒಬ್ಬ ವ್ಯಕ್ತಿಯ ಮೇಲಷ್ಟೇ ಅಲ್ಲದೆ, ಅವರ ಇಡೀ ಕುಟುಂಬ ಹಾಗೂ ಯುವ ಪೀಳಿಗೆಯ ಭವಿಷ್ಯದ ಮೇಲೆ ಅತ್ಯಂತ ಗಂಭೀರವಾದ ಪರಿಣಾಮ ಬೀರುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಮಾದಕ ವ್ಯಸನದ ವಿರುದ್ಧ ಧ್ವನಿ ಎತ್ತಬೇಕಾಗಿದೆ, ಎಂದು ತಿಳಿಸಿದರು.

ಯಾವುದೇ ಒಂದು ವೈದ್ಯಕೀಯ ಔಷಧಿಯನ್ನೇ ಆಗಲಿ, ಅದನ್ನು ನಿಗದಿತ ಪ್ರಮಾಣಕ್ಕಿಂತ ಅತಿಯಾಗಿ ಬಳಕೆ ಮಾಡಿದರೆ ಅದು ಔಷಧಿಯಾಗುಳಿಯದೆ ವಿಷವಾಗಿ ಮಾರ್ಪಡುತ್ತದೆ ಎಂಬುದು ನಮಗೆಲ್ಲ ತಿಳಿದಿರುವ ಸತ್ಯ, ಎಂದು ಎಸ್ಪಿ ರೋಹನ್ ಜಗದೀಶ್ ಅವರು ನೆನಪಿಸಿದರು. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಯುವಜನತೆ ಗಾಂಜಾ, ಹಶೀಶ್, ಆಯಿಲ್, ಒಪಿಯಾಡ್ಸ್ ಹಾಗೂ ವಿವಿಧ ಕೆಮಿಕಲ್ ಡ್ರಗ್ಸ್ಗಳಂತಹ ಮಾದಕ ವ್ಯಸನಗಳಿಗೆ ತುತ್ತಾಗುತ್ತಿದ್ದಾರೆ. ಇವು ನೇರವಾಗಿ ಅಥವಾ ಪರೋಕ್ಷವಾಗಿ ಮನುಷ್ಯನ ಆರೋಗ್ಯ, ಭವಿಷ್ಯ, ಕುಟುಂಬ ಹಾಗೂ ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಹಾನಿ ಮಾಡಿ ಸಾವು-ನೋವಿಗೆ ದೂಡುತ್ತವೆ, ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಯುವಕರಲ್ಲಿ ಕಾಡುವ 'ಸ್ನೇಹಿತರ ಒತ್ತಡ'ದ ಕುರಿತು ಎಚ್ಚರಿಸಿದ ಎಸ್ಪಿಯವರು, ಸ್ನೇಹಿತರು ಕೇವಲ 'ಒಂದೇ ಒಂದು ಬಾರಿ ಪ್ರಯತ್ನಿಸಿ ನೋಡು, ಒಮ್ಮೆ ಟ್ರೈ ಮಾಡು' ಎಂದು ಹೇಳುವ ಮಾತಿಗೆ ಮರುಳಾಗಿ ಯಾರೂ ಈ ಒತ್ತಡಕ್ಕೆ ಒಳಗಾಗಬಾರದು. ಏಕೆಂದರೆ, ಕೇವಲ ಒಂದು ಬಾರಿಯ ಬಳಕೆಯೂ ಸಹ ನಿಮ್ಮನ್ನು ಆ ವ್ಯಸನಕ್ಕೆ ದಾಸರನ್ನಾಗಿ ಮಾಡಬಹುದು. ಈ ಚಟ ಮುಂದುವರಿದಲ್ಲಿ ನಿಮ್ಮ ಹಾಗೂ ನಿಮ್ಮ ಇಡೀ ಕುಟುಂಬದ ನೆಮ್ಮದಿ ನಾಶವಾಗುತ್ತದೆ, ಎಂದು ವಿದ್ಯಾರ್ಥಿಗಳಿಗೆ ಕಟು ಸತ್ಯವನ್ನು ಮನವರಿಕೆ ಮಾಡಿಸಿದರು.

ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯು ಸದಾ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ ರೋಹನ್ ಜಗದೀಶ್ ಅವರು, ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಿ ಸಾಕಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಥಮ ಬಾರಿಗೆ ಗದಗ ಜಿಲ್ಲೆಯಲ್ಲಿ 'ಪಿಟ್ ಎನ್ಡಿಪಿಎಸ್' ಕಾಯ್ದೆಯಡಿ ಕುಖ್ಯಾತ ಪೆಡ್ಲರ್ ಒಬ್ಬನ ವಿರುದ್ಧ ಪ್ರಕರಣ ದಾಖಲಿಸಿ, ಅತ್ಯಂತ ಕಠಿಣ ಶಿಕ್ಷೆ ವಿಧಿಸಿ ಆತನನ್ನು ಜೈಲಿಗಟ್ಟಲಾಗಿದೆ, ಎಂದು ಇಲಾಖೆಯ ದೃಢ ನಿರ್ಧಾರವನ್ನು ಪ್ರಶಂಸಿದರು.

ಸಮಾಜದಲ್ಲಿ ಮಾದಕ ವಸ್ತುಗಳ ಸಂಪೂರ್ಣ ನಿರ್ಮೂಲನೆಗೆ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಗದಗ ಜಿಲ್ಲೆಯನ್ನು ಸಂಪೂರ್ಣ ನಶೆ ಮುಕ್ತವನ್ನಾಗಿಸಲು ಎಲ್ಲರ ಸಹಕಾರ ಕೋರಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.

ಅಪರ ಜಿಲ್ಲಾಧಿಕಾರಿಗಳಾದ ಡಾ. ದುರಗೇಶ್ ಕೆ.ಆರ್ ಮಾತನಾಡಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಮಾದಕ ವಸ್ತುಗಳ ತಡೆಗೆ ಜಿಲ್ಲಾ ಮಟ್ಟದಲ್ಲಿ ಹಲವಾರು ಕಾರ್ಯಪಡೆಗಳನ್ನು ರಚಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಕೇವಲ ಕಾನೂನು ಕ್ರಮಗಳಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಸಮಾಜದಲ್ಲಿ ಇದರ ವಿರುದ್ಧ ವ್ಯಾಪಕ ಜನಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ, ಎಂದು ತಿಳಿಸಿದರು.

ಸಾಮಾಜಿಕ ಕಳಕಳಿಯೊಂದಿಗೆ ನಿರಂತರವಾಗಿ ಇಂತಹ ಉಪಯುಕ್ತ ಜಾಗೃತಿ ಅಭಿಯಾನಗಳನ್ನು ಆಯೋಜಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಶ್ಲಾಘಿಸಿದ ಅವರು, ಅಭಿಯಾನದ ಯಶಸ್ಸಿಗೆ ಕೈಜೋಡಿಸಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಕ್ರೀಡಾ ಇಲಾಖೆ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಕಾಳಜಿಯನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾದಕ ವ್ಯಸನದ ವಿರುದ್ಧ ನಡೆದ ಐತಿಹಾಸಿಕ ಹೋರಾಟಗಳನ್ನು ಸ್ಮರಿಸಿದ ಅಪರ ಜಿಲ್ಲಾಧಿಕಾರಿಗಳು, ಹಿಂದೆ ಇಳಕಲ್ನ ಪೂಜ್ಯ ಮಹಾಂತ ಸ್ವಾಮಿಗಳವರು ಧೂಮಪಾನ, ಮದ್ಯಪಾನ ಹಾಗೂ ಮಾದಕ ವಸ್ತುಗಳ ವಿರುದ್ಧ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದ್ದರು. 'ನಿಮ್ಮಲ್ಲಿರುವ ಕುಡಿತದ ಚಟ ಹಾಗೂ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ' ಎಂದು ಕೇಳುವ ಮೂಲಕ ಇಡೀ ಸಮಾಜದಲ್ಲಿ ದೊಡ್ಡ ಪರಿವರ್ತನೆ ತಂದಿದ್ದರು. ಪ್ರಸ್ತುತ ರಾಜ್ಯ ಸರ್ಕಾರವು ಸಹ ಅಂತಹದ್ದೇ ಕಳಕಳಿಯೊಂದಿಗೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ, ಎಂದರು.

ಇತ್ತೀಚಿನ ದಿನಗಳಲ್ಲಿ ಯುವಜನತೆ ಕೇವಲ ಸಾಂಪ್ರದಾಯಿಕ ಮಾದಕ ವಸ್ತುಗಳಷ್ಟೇ ಅಲ್ಲದೆ, ಅಪಾಯಕಾರಿ 'ಮೆಡಿಕಲ್ ಡ್ರಗ್ಸ್' ಹಾಗೂ ಕೆಮ್ಮಿನ ಸಿರಪ್ಗಳ ದುರ್ಬಳಕೆಗೆ ಅತಿಯಾಗಿ ದಾಸರಾಗುತ್ತಿರುವುದರ ಕುರಿತು ಡಾ. ದುರಗೇಶ್ ಅವರು ತೀವ್ರ ಕಳಕಳಿ ವ್ಯಕ್ತಪಡಿಸಿದರು. ಕೇವಲ ನಶೆಗಾಗಿ ಮತ್ತು ಅತಿಯಾಗಿ ನಿದ್ರೆ ಮಾಡಲು ಇಂತಹ ಸಿರಪ್ಗಳನ್ನು ಯುವಕರು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂತಹ ನಿಷೇಧಿತ ಹಾಗೂ ದುರ್ಬಳಕೆಯಾಗುವ ಔಷಧಗಳ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲು ಈಗಾಗಲೇ ಜಿಮ್ಸ್ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸರ್ಕಾರದ ನಿರ್ದೇಶನದಂತೆ ಕಡಕ ಸೂಚನೆ ನೀಡಲಾಗಿದೆ, ಎಂದು ಸ್ಪಷ್ಟಪಡಿಸಿದರು.

ಒಂದು ಮನೆಯಲ್ಲಿ ಕೇವಲ ಒಬ್ಬ ವ್ಯಕ್ತಿ ಮಾದಕ ವ್ಯಸನಿಯಾದರೂ, ಅದು ಇಡೀ ಕುಟುಂಬ ಹಾಗೂ ಸುತ್ತಮುತ್ತಲಿನ ವಾತಾವರಣದ ನೆಮ್ಮದಿಯನ್ನು ಕದಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವಜನತೆ ಕೇವಲ ಈ ವಾಕಥಾನ್ನಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ, ತಮ್ಮ ತಮ್ಮ ಗ್ರಾಮ ಹಾಗೂ ಮನೆಗಳಲ್ಲಿ ಯಾರಾದರೂ ವ್ಯಸನಿಗಳಿದ್ದರೆ ಅವರಿಗೆ ತಿಳಿಹೇಳಿ ಜಾಗೃತಿ ಮೂಡಿಸಬೇಕು. ಮಾದಕ ವ್ಯಸನದಿಂದ ಮುಕ್ತಿ ಹೊಂದಲು ಯೋಗ, ಪ್ರಾಣಾಯಾಮ ಧ್ಯಾನ ಮುಂತಾದ ಉತ್ತಮ ಹವ್ಯಾಸಗಳನ್ನು ತಮ್ಮ ಜೀವನಲ್ಲಿ ರೂಢಿಸಿಕೊಳ್ಳಬೇಕು, ಎಂದು ಕರೆ ನೀಡಿದರು.

ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಅವರ ದಕ್ಷ ನಾಯಕತ್ವ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅಪರ ಜಿಲ್ಲಾಧಿಕಾರಿಗಳು, ಗದಗ ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿ 'ವ್ಯಸನ ಮುಕ್ತ ಜಿಲ್ಲೆ'ಯನ್ನಾಗಿ ಮಾಡಲು ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕೆಂದು ವಿನಂತಿಸಿದರು.

ಐಎಂಎ ಹಿರಿಯ ಅಧ್ಯಕ್ಷರಾದ ಡಾ. ಪ್ಯಾರಲಾಲ್ ಮುಲಾನಿ ಮಾತನಾಡಿ ಮಾದಕ ವ್ಯಸನ ಎಂಬುದು ಯುವಜನತೆಯ ಇಡೀ ಜೀವನ ಹಾಗೂ ವೃತ್ತಿ ಬದುಕನ್ನು ನಾಶಪಡಿಸುತ್ತದೆ. ಇಂತಹ ವ್ಯಸನಗಳಿಂದ ಯುವ ಪೀಳಿಗೆಯನ್ನು ರಕ್ಷಿಸಲು ದೈಹಿಕ ಮತ್ತು ಮಾನಸಿಕ ಚಿಕಿತ್ಸೆಗಳ ಜೊತೆಗೆ ಆಪ್ತಸಮಾಲೋಚನೆ ನಡೆಸುವುದು ಅತ್ಯಂತ ಪ್ರಮುಖವಾಗಿದೆ, ಎಂದು ಅಭಿಪ್ರಾಯಪಟ್ಟರು.

ಯುವಜನತೆ ಒಮ್ಮೆ ರಾಸಾಯನಿಕ ಅಥವಾ ದೈಹಿಕವಾಗಿ ಮಾದಕ ವಸ್ತುಗಳಿಗೆ ದಾಸರಾದಾಗ, ಅದರಿಂದ ಹೊರಬರಲು ಕೇವಲ ಔಷಧಗಳಷ್ಟೇ ಸಾಲದು. ಯೋಗ, ಮನೋವೈದ್ಯಕೀಯ ಚಿಕಿತ್ಸೆ, ಸೈಕೋಥೆರಪಿ ಹಾಗೂ ಸೂಕ್ತ ಕೌನ್ಸೆಲಿಂಗ್ ಸೆಷನ್ಗಳನ್ನು ಒಳಗೊಂಡ ಸಮಗ್ರ ಚಿಕಿತ್ಸಾ ವಿಧಾನದ ಅಗತ್ಯವಿರುತ್ತದೆ, ಎಂದು ಡಾ. ಮುಲಾನಿ ಅವರು ವಿವರಿಸಿದರು. ಈ ನಿಟ್ಟಿನಲ್ಲಿ ಇಲಾಖೆಯು ರೂಪಿಸಿರುವ ಪ್ರಸ್ತಾವನೆಗಳು ಹಾಗೂ ಕೈಗೊಂಡಿರುವ ಕ್ರಮಗಳು ಯುವಕರನ್ನು ವ್ಯಸನಮುಕ್ತರನ್ನಾಗಿಸಲು ಉತ್ತಮ ಫಲಿತಾಂಶ ನೀಡಲಿವೆ ಎಂದು ಅವರು ಆಶಿಸಿದರು. ಬಹುಶಃ ಇಂತಹ ವಿಶಿಷ್ಟವಾದ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವ ಮೊದಲ ಜಿಲ್ಲೆ ಗದಗ ಇರಬಹುದು ಎಂದು ಅವರು ಶ್ಲಾಘಿಸಿದರು.

ಡ್ರಗ್ಸ್, ತಂಬಾಕು, ಗುಟ್ಕಾ ಹಾಗೂ ಮದ್ಯಪಾನದಂತಹ ಕೆಟ್ಟ ಚಟಗಳಿಂದ ಮುಕ್ತಿ ಹೊಂದುವುದರ ಜೊತೆಗೆ ಯುವಕರು ತಮ್ಮ ಜೀವನದಲ್ಲಿ ಕೆಲವು ಉತ್ತಮ ಹವ್ಯಾಸಗಳಿಗೆ ದಾಸರಾಗಬೇಕು ಎಂದು ಅವರು ಕರೆ ನೀಡಿದರು. ಪುಸ್ತಕ ಓದುವುದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಯುವಕರು ರೂಢಿಸಿಕೊಳ್ಳಬೇಕು. ಇವು ನಿಮ್ಮನ್ನು ಧನಾತ್ಮಕವಾಗಿ ಸದೃಢರನ್ನಾಗಿ ಮಾಡುತ್ತವೆ, ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಮುಂಜಾನೆಯ ತಂಪಾದ ವಾತಾವರಣದಲ್ಲಿ ಉತ್ಸಾಹದಿಂದ ವಾಕಥಾನ್ನಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಿದ ಅವರು, ಚುರುಕಾದ ನಡಿಗೆಯು ನಮ್ಮ ದೇಹದ ಒತ್ತಡವನ್ನು ನಿವಾರಿಸುವ ಅತ್ಯುತ್ತಮ ಸಾಧನವಾಗಿದೆ, ಎಂದರು. ಇದು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಕಾರ್ಯಕ್ರಮದಲ್ಲಿ ನೆರೆದಿರುವ ಯುವ ಹಾಗೂ ಆರೋಗ್ಯವಂತ ಸಮಾಜವು ಸದಾ ಇದೇ ರೀತಿ ಸದೃಢವಾಗಿ ಮುಂದುವರಿಯಲಿ ಎಂದು ಅವರು ಹಾರೈಸಿದರು.

ಈ ವಾಕಥಾನ್ ದಲ್ಲಿ ಡಿವೈಎಸ್.ಪಿ ಮಹಾಂತೇಶ್ ಸಜ್ಜನ, ಡಿ.ಎಸ್.ಪಿ ಮುರ್ತುಜಾ ಖಾದ್ರಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಮ್ಸ್ ನರ್ಸಿಂಗ್ ಕಾಲೇಜ್, ಲಯನ್ಸ್ ಕ್ಲಬ್, ಎಎಸ್ಎಸ್ ಕಾಲೇಜ್, ಸಂಕಲ್ಪ ನರ್ಸಿಂಗ್ ಕಾಲೇಜ್, ಕೆಎಲ್ಇ ಪ್ಯಾರಾಮೆಡಿಕಲ್ ಕಾಲೇಜ್, ಬಸವೇಶ್ವರ ಪ್ಯಾರಾಮೆಡಿಕಲ್ ಕಾಲೇಜ್, ಸಿಎಸ್ಐ ನರ್ಸಿಂಗ್ ಕಾಲೇಜ್ ಬೆಟಗೇರಿ, ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜ್, ಸರ್ಕಾರಿ ಪದವಿಪೂರ್ವ ಕಾಲೇಜುಗಳು, ಐಎಂಎ ಗದಗ, ವರ್ತಕರ ಸಂಘ ಗದಗ-ಬೆಟಗೇರಿ, ಇನ್ನರ್ವ್ಹೀಲ್ ಕ್ಲಬ್, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಔಷಧಿ ವ್ಯಾಪಾರಿಗಳ ವರ್ತಕರ ಸಂಘ, ಜೈನ್ ಗ್ರೂಪ್ಸ್ ಆಫ್ ಸಖಿ ಸಹೇಲಿ, ರೆಡ್ಕ್ರಾಸ್ ಸಂಸ್ಥೆ, ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯ, ಸಿಎಸ್ಐ ಆಸ್ಪತ್ರೆ ಹಾಗೂ ಜೆಟಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪದಾಧಿಕಾರಿಗಳು ಹಾಜರಿದ್ದರು.

ಈ ವಾಕಥಾನ್ ವು ಗಾಂಧಿ ಸರ್ಕಲ್ ದಿಂದ ಪ್ರಾರಂಭವಾಗಿ ರೋಟರಿ ಸರ್ಕಲ್ ಮಾರ್ಗವಾಗಿ ಭೂಮರೆಡ್ಡಿ ಸರ್ಕಲ್, ಹಳೆ ಡಿಸಿ ಆಫೀಸ್, ಬಸವೇಶ್ವರ ಮೂರ್ತಿ ಭೀಷ್ಮಕೆರೆ ವರೆಗೆ ಬಂದು ತಲುಪಿತು. ಮಾದಕ ವ್ಯಸನ ಮುಕ್ತ ಗದಗ ವಾಕಾಥಾನ್-2026 ಕುರಿತು ಜಾಗೃತಿ ಮೂಡಿಸಿದ ಈ ವಾಕಥಾನ್ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿತು. ವಾಕಥಾನ್ ದಲ್ಲಿ ಪಾಲ್ಗೊಂಡಿದ್ದ ಗದಗ ಜಿಲ್ಲೆಯ ಸಾರ್ವಜನಿಕರೇ, ಕ್ರೀಡಾ ಪಟುಗಳೆ, ವಿದ್ಯಾರ್ಥಿಗಳೆ ಎಲ್ಲಾ ಇಲಾಖೆಯ ನೌಕರರೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಗದಗ ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತಗೊಳಿಸೋಣ... ಮಾದಕ ವ್ಯಸನ ಜೀವನ ಮಸಣ, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲರ ಜವಾಬ್ದಾರಿ, ಕಾನೂನು ಪಾಲಿಸಿ ಸುರಕ್ಷಿತ ಜೀವನ ಸಾಗಿಸಿ, ಮಾದಕ ವ್ಯಸನ ಮುಕ್ತ ಅಭಿಯಾನಕ್ಕೆ ಜಯವಾಗಲಿ,ಮಾದಕ ವ್ಯಸನೀಯ ಬದುಕು ಕಗ್ಗತ್ತಲಿನ ಬದುಕು, ನಮ್ಮೆಲ್ಲರ ನಡೆ ಮಾದಕ ವ್ಯಸನ ಮುಕ್ತದ ಕಡೆ ಎಂಬ ಘೋಷವಾಕ್ಯದೊಂದಿಗೆ ಸಾಗಿದ ಜಾಥಾ ಸಾರ್ವಜನಿಕರ ಗಮನ ಸೆಳೆಯಿತು. ವಿದ್ಯಾರ್ಥಿಗಳು ಘೋಷಣಾ ಫಲಕಗಳನ್ನ ಹಿಡಿದು ಮಾದಕ ವ್ಯಸನ ಮುಕ್ತ ಗದಗ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande