ಬಿಡದಿ ಟೌನ್ಶಿಪ್ ವಿವಾದ ; ಮುಖ್ಯಮಂತ್ರಿಗೆ ಕುಮಾರಸ್ವಾಮಿ ಬಹಿರಂಗ ಸವಾಲು
ಬೆಂಗಳೂರು, 22 ಜೂನ್ (ಹಿ.ಸ.) : ಆ್ಯಂಕರ್ : ಬಿಡದಿ ಸ್ಮಾರ್ಟ್ ಸಿಟಿ ಟೌನ್ಶಿಪ್ ಯೋಜನೆ ಸುತ್ತ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಖಲೆಗಳ ಸಮೇತ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕ
Hdk


ಬೆಂಗಳೂರು, 22 ಜೂನ್ (ಹಿ.ಸ.) :

ಆ್ಯಂಕರ್ : ಬಿಡದಿ ಸ್ಮಾರ್ಟ್ ಸಿಟಿ ಟೌನ್ಶಿಪ್ ಯೋಜನೆ ಸುತ್ತ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಖಲೆಗಳ ಸಮೇತ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೇರ ಸವಾಲು ಹಾಕಿರುವ ಅವರು, “ಧೈರ್ಯವಿದ್ದರೆ ನನ್ನೊಂದಿಗೆ ಭೈರಮಂಗಲಕ್ಕೆ ಬನ್ನಿ. ಅಲ್ಲಿನ ರೈತರು ಭೂಮಿ ನೀಡಲು ಸಿದ್ಧರಿದ್ದಾರೆಯೇ ಇಲ್ಲವೇ ಎಂಬುದನ್ನು ಸಾರ್ವಜನಿಕವಾಗಿ ಕೇಳೋಣ” ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದರು. ತಾವು 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಐದು ಕಡೆ ಟೌನ್ಶಿಪ್ ಯೋಜನೆಗಳನ್ನು ಘೋಷಿಸಿದ್ದು ನಿಜ. ಆದರೆ ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ 2007ರ ಆಗಸ್ಟ್ 1ರಂದು ವಿಧಾನ ಸಭೆಯಲ್ಲೇ ಬಿಡದಿ ಟೌನ್ಶಿಪ್ ಯೋಜನೆಯನ್ನು ಕೈಬಿಟ್ಟಿದ್ದೆ ಎಂದು ಅವರು ಸ್ಪಷ್ಟಪಡಿಸಿದರು.

“ಅಂದು ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಇದು ಫಲವತ್ತಾದ ಕೃಷಿ ಭೂಮಿ, ರೈತರು ಭೂಮಿ ನೀಡಬಾರದು, ಇದು ರಿಯಲ್ ಎಸ್ಟೇಟ್ ಮಾಫಿಯಾದ ದಂಧೆ ಎಂದು ಸದನದಲ್ಲಿ ಹೇಳಿದ್ದರು. ಆ ಎಲ್ಲ ದಾಖಲೆಗಳು ನನ್ನ ಬಳಿ ಇವೆ,” ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, “2025ರ ಮಾರ್ಚ್ 12ರಂದು ಯೋಜನೆಗೆ ಸಂಬಂಧಿಸಿದ ಮೊದಲ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿದ್ದು ಇದೇ ಸರ್ಕಾರ. ಬಳಿಕ ಜೂನ್ 10ರಂದು ಅಂತಿಮ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಹೀಗಿರುವಾಗ ಈ ಯೋಜನೆಯಲ್ಲಿ ನನ್ನ ಪಾತ್ರ ಎಲ್ಲಿದೆ?” ಎಂದು ಪ್ರಶ್ನಿಸಿದರು.

“ನನಗೆ ಈ ಯೋಜನೆ ಬಗ್ಗೆ ಆಸಕ್ತಿ ಇದ್ದಿದ್ದರೆ, 2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಇದನ್ನು ಜಾರಿಗೊಳಿಸಬಹುದಿತ್ತು. ಆದರೆ ನಾನು ಹಾಗೆ ಮಾಡಿಲ್ಲ,” ಎಂದು ಅವರು ಹೇಳಿದರು.

ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ರೈತರ ಅಭಿಪ್ರಾಯವನ್ನು ಕಡೆಗಣಿಸಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, “ಸುಮಾರು 4,500 ರೈತರು ಭೂಸ್ವಾಧೀನಕ್ಕೆ ವಿರೋಧವಾಗಿ ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಒಂದಕ್ಕೂ ಸರಿಯಾದ ಉತ್ತರ ನೀಡಿಲ್ಲ. ರೈತರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆಸಿ ಒತ್ತಡ ಹೇರುವ ಕೆಲಸ ನಡೆಯುತ್ತಿದೆ,” ಎಂದು ದೂರಿದರು.

ಇದಲ್ಲದೆ, ಟೌನ್ಶಿಪ್ ಯೋಜನೆಗೆ ಸಂಬಂಧಿಸಿದ ಕಡತಗಳ ನಿರ್ವಹಣೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯದೇ, ನಾಗರಭಾವಿ ಸಮೀಪದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, “ಕೆಲವರು ಬ್ಯಾನರ್ ಹಾಕಿದ್ದಾರೆ ಎಂದು ರೈತರೆಲ್ಲರೂ ಭೂಮಿ ನೀಡಲು ಒಪ್ಪಿದ್ದಾರೆ ಎಂದು ಭಾವಿಸಬೇಡಿ. ನನ್ನೊಂದಿಗೆ ಭೈರಮಂಗಲಕ್ಕೆ ಬನ್ನಿ. ರೈತರನ್ನು ಸಾರ್ವಜನಿಕವಾಗಿ ಕೇಳಿ ಸತ್ಯ ತಿಳಿದುಕೊಳ್ಳೋಣ,” ಎಂದು ಸವಾಲು ಹಾಕಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande