ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಗುರುಲಿಂಗಪ್ಪ ಅಂಗಡಿ ವಾಗ್ದಾಳಿ
ಆರ್ಎಸ್ಎಸ್
Press meet


ವಿಜಯಪುರ, 22 ಜೂನ್ (ಹಿ.ಸ.) :

ಆಂಕರ್ : ಆರ್‌.ಎಸ್‌.ಎಸ್ ನೋಂದಣಿ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ ಖರ್ಗೆ ನೀಡುತ್ತಿರುವ ಹೇಳಿಕೆಗಳಿಗೆ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಅನುದಾನ ಪಡೆಯುವ ಸಂಘ-ಸಂಸ್ಥೆಗಳಿಗೆ ಮಾತ್ರ ನೋಂದಣಿ ಅಗತ್ಯವಿದ್ದು, ಸರ್ಕಾರದ ಯಾವುದೇ ನೆರವು ಪಡೆಯದ ಸಂಸ್ಥೆಗಳಿಗೆ ಕಡ್ಡಾಯ ನೋಂದಣಿ ನಿಯಮ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಲಿಂಗಪ್ಪ ಅಂಗಡಿ, 1925ರಿಂದ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌.ಎಸ್‌.ಎಸ್) ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ವಿರುದ್ಧ ಈ ಹಿಂದೆ ದಾಖಲಾಗಿದ್ದ ಹಲವು ಪ್ರಕರಣಗಳಲ್ಲಿಯೂ ನ್ಯಾಯಾಲಯಗಳಲ್ಲಿ ಸಂಘ ಜಯ ಸಾಧಿಸಿದೆ ಎಂದು ಹೇಳಿದರು.

ಆರ್‌.ಎಸ್‌.ಎಸ್ ಕುರಿತು ಅನಗತ್ಯ ಆರೋಪ ಮಾಡುವ ಬದಲು ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ರಾಜಕೀಯ ಉದ್ದೇಶದಿಂದ ಒಂದು ಸಂಘಟನೆಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಟೀಕಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಚಿದಾನಂದ ಚಲವಾದಿ, ಸಂಸದ ರಮೇಶ ಜಿಗಜಿಣಗಿ ಅವರು ಖರ್ಗೆ ಕುಟುಂಬದ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲವರು ರಾಜಕೀಯವಾಗಿ ವಿಷಯವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸೆ ಮಾತನಾಡಿ, ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಆರ್ಎಸ್ಎಸ್ ವಿರುದ್ಧ ಹೇಳಿಕೆಗಳನ್ನು ನೀಡಲಾಗುತ್ತಿದೆ. ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಜನರಿಗೆ ತಿಳಿದಿದ್ದು, ಇಂತಹ ಆರೋಪಗಳಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಈರಣ್ಣ ರಾವೂರ, ವಿಜಯ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande