
ವಿಜಯಪುರ, 22 ಜೂನ್ (ಹಿ.ಸ.) :
ಆ್ಯಂಕರ್ : ಕೃಷ್ಣಾ ನದಿ ತಟದ ರೈತರು ಹಾಗೂ ಉತ್ತರ ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾಗಿರುವ ಆಲಮಟ್ಟಿ ಅಣೆಕಟ್ಟಿನ ನೀರು ಸಂಗ್ರಹಣೆ ಮಟ್ಟ ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯ ನಿಯೋಗವು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗವು ಸಲ್ಲಿಸಿದ ಮನವಿಯಲ್ಲಿ, ಕೃಷ್ಣಾ ನದಿ ತಟದ ಲಕ್ಷಾಂತರ ರೈತರ ಬದುಕಿಗೆ ಆಲಮಟ್ಟಿ ಜಲಾಶಯವು ಜೀವನಾಡಿಯಾಗಿದ್ದು, ನೀರಾವರಿ, ಕುಡಿಯುವ ನೀರು ಹಾಗೂ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಜಲಾಶಯದಲ್ಲಿ 524.256 ಮೀಟರ್ ಮಟ್ಟದವರೆಗೆ ನೀರು ಸಂಗ್ರಹಣೆ ಮಾಡುವುದು ಅತ್ಯಗತ್ಯ ಎಂದು ವಿವರಿಸಲಾಯಿತು.
ಆಲಮಟ್ಟಿ ಜಲಾಶಯದ ಪೂರ್ಣ ಪ್ರಮಾಣದ ಬಳಕೆಗೆ ಸಂಬಂಧಿಸಿದಂತೆ ನೆರೆಯ ರಾಜ್ಯಗಳಿಂದ ಉಂಟಾಗುತ್ತಿರುವ ಕಾನೂನು ತೊಡಕುಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿತು. ಈ ಮೂಲಕ ಕೃಷ್ಣಾ ನದಿ ನೀರಿನ ನ್ಯಾಯಸಮ್ಮತ ಹಂಚಿಕೆ ಹಾಗೂ ಈ ಭಾಗದ ಅಭಿವೃದ್ಧಿಗೆ ವೇಗ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಆಲಮಟ್ಟಿ ನೀರು ಸಂಗ್ರಹಣೆ ವಿಚಾರದ ಕಾನೂನು ಹಾಗೂ ತಾಂತ್ರಿಕ ಅಂಶಗಳ ಕುರಿತು ತಜ್ಞರು ಮತ್ತು ಕೇಂದ್ರ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು, ತಮ್ಮಿಂದ ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ವಿಷಯದ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಪರಿಹಾರದ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದರು. ಅಗತ್ಯವಿದ್ದಲ್ಲಿ ಸಂಬಂಧಿಸಿದ ಎಲ್ಲರೊಂದಿಗೆ ಸಭೆ ನಡೆಸಿ ಕೃಷ್ಣಾ ಕೊಳ್ಳ ಭಾಗಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ನಿಯೋಗವು ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ, ಪಿ.ಸಿ. ಗದ್ದಿಗೌಡರ್ ಹಾಗೂ ರಮೇಶ ಜಿಗಜಿಣಗಿ ಸೇರಿದಂತೆ ಹಲವು ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
“ಉತ್ತರ ಕರ್ನಾಟಕದ ಜನರ ನೀರಿನ ಹಕ್ಕಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ರಾಜಕೀಯ ಭೇದ ಮರೆತು ಎಲ್ಲ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ಈ ಭಾಗದ ನ್ಯಾಯಯುತ ಬೇಡಿಕೆಗೆ ಸ್ಪಂದಿಸಬೇಕು. ಕೃಷ್ಣಾ ನದಿ ನೀರಿನ ಹಕ್ಕು, ರೈತರ ಬದುಕು ಮತ್ತು ಪ್ರದೇಶದ ಅಭಿವೃದ್ಧಿಗಾಗಿ ಹೋರಾಟವನ್ನು ಇನ್ನಷ್ಟು ಬಲಪಡಿಸಲಾಗುವುದು” ಎಂದು ಸಮಿತಿಯ ಪದಾಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ಜಮಖಂಡಿಯ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ, ರಾಜೇಂದ್ರ ಪೊದ್ದಾರ, ಪಂಚಪ್ಪ ಕಲಬುರ್ಗಿ, ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಬಿ. ಭಗವಾನ್ ರೆಡ್ಡಿ, ಎಸ್.ವಿ. ಪಾಟೀಲ್, ಸುರೇಶ ಬಿಜಾಪುರ, ಭೋಗೇಶ ಸೋಲಾಪುರ, ಗುರುರಾಜ ಪಡಶೆಟ್ಟಿ ಸೇರಿದಂತೆ ಸಮಿತಿಯ ಹಲವು ಸದಸ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande