ಬೆಳೆ ವಿಮೆ ನೋಂದಣಿಗೆ ರೈತರಿಗೆ ಕೃಷಿ ಇಲಾಖೆಯ ಸಲಹೆ ; ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಮನವಿ
ಗದಗ, 22 ಜೂನ್ (ಹಿ.ಸ.) : ಆ್ಯಂಕರ್ : 2026-27ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯ ರೈತರು ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ
ಫೋಟೋ


ಗದಗ, 22 ಜೂನ್ (ಹಿ.ಸ.) :

ಆ್ಯಂಕರ್ : 2026-27ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯ ರೈತರು ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.

ರಾಜ್ಯ ಸರ್ಕಾರವು ಮುಂಗಾರು ಹಂಗಾಮಿನ ಅಧಿಸೂಚಿತ ಬೆಳೆಗಳಿಗೆ ಬೆಳೆ ವಿಮೆ ಯೋಜನೆ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದ್ದು, ಬೆಳೆಸಾಲ ಪಡೆದ ರೈತರಿಗೆ ಯೋಜನೆ ಕಡ್ಡಾಯವಾಗಿರುತ್ತದೆ. ಬೆಳೆಸಾಲ ಪಡೆದ ರೈತರು ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ, ಬೆಳೆ ವಿಮೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ ಏಳು ದಿನಗಳ ಮುಂಚಿತವಾಗಿ ಸಂಬಂಧಿಸಿದ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತ ಮುಚ್ಚಳಿಕೆ ಪತ್ರ ಸಲ್ಲಿಸುವ ಮೂಲಕ ಯೋಜನೆಯಿಂದ ಹೊರಗುಳಿಯಬಹುದು. ಬೆಳೆಸಾಲ ಪಡೆಯದ ರೈತರಿಗೆ ಯೋಜನೆ ಐಚ್ಛಿಕವಾಗಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಗದಗ ಜಿಲ್ಲೆಗೆ ಇಂಡಸ್ ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ಅನುಷ್ಠಾನ ವಿಮಾ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ. ಜಿಲ್ಲೆಯ ರೈತರು ತಮ್ಮ ಬೆಳೆಗಳಿಗೆ ವಿಮಾ ರಕ್ಷಣೆ ಪಡೆಯಲು ಮುಂಚಿತವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಬೆಳೆ ವಿಮೆ ಮಾಡಿಸಿಕೊಳ್ಳುವ ರೈತರು ಕಡ್ಡಾಯವಾಗಿ ಹೊಂದಿರಬೇಕು. ರೈತರು ತಮ್ಮ ಜಮೀನಿನ ಪಹಣಿ, ಖಾತೆ ಪುಸ್ತಕ, ಕಂದಾಯ ರಶೀದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ ಗ್ರಾಮ ಒನ್ ಕೇಂದ್ರಗಳಿಗೆ ಸಲ್ಲಿಸಿ “ಸಂರಕ್ಷಣೆ ಪೋರ್ಟಲ್” ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ವಿಮಾ ಸಂಸ್ಥೆಯ ಗದಗ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವಿಶೇಷತೆ ಎಂದರೆ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟಕ್ಕೂ ಪರಿಹಾರ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ, ಗುಡುಗು-ಮಿಂಚು ಹಾಗೂ ಬೆಂಕಿ ಅವಘಡಗಳಿಂದ ಬೆಳೆ ಹಾನಿಯಾದಲ್ಲಿ ವೈಯಕ್ತಿಕವಾಗಿ ನಷ್ಟವನ್ನು ಅಂದಾಜಿಸಿ ವಿಮಾ ಪರಿಹಾರ ನೀಡಲಾಗುತ್ತದೆ.

ಇಂತಹ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ವಿಮೆ ಮಾಡಿಸಿರುವ ರೈತರು 72 ಗಂಟೆಗಳೊಳಗಾಗಿ ಸಂಬಂಧಿಸಿದ ವಿಮಾ ಸಂಸ್ಥೆಯ ಕಚೇರಿಗೆ ಲಿಖಿತ ಮಾಹಿತಿ ನೀಡಬೇಕು ಅಥವಾ ವಿಮಾ ಸಂಸ್ಥೆಯ ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ದಾಖಲಿಸಬೇಕು. ಅಲ್ಲದೇ ಕಟಾವಿನ ನಂತರ ಹೊಲದಲ್ಲಿ ಒಣಗಲು ಬಿಟ್ಟ ಬೆಳೆಗೆ ಅಕಾಲಿಕ ಮಳೆ ಅಥವಾ ಚಂಡಮಾರುತದಿಂದ ಹಾನಿಯಾದರೂ ಸಹ ವೈಯಕ್ತಿಕ ನಷ್ಟ ಮೌಲ್ಯಮಾಪನ ಮಾಡಿ ವಿಮಾ ಪರಿಹಾರ ನೀಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕೃಷಿ ಇಲಾಖೆ ರೈತರಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ. ರೈತರು ತಮ್ಮ ಜಮೀನಿನಲ್ಲಿ ವಾಸ್ತವವಾಗಿ ಬಿತ್ತಿದ ಬೆಳೆಯನ್ನು ಮಾತ್ರ ಅರ್ಜಿಯಲ್ಲಿ ನಮೂದಿಸಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ರೈತರು ಸ್ವತಃ ಹಾಜರಾಗಿ ನೋಂದಣಿ ಮಾಡಿಸಬೇಕು. ಒಂದು ವೇಳೆ ಭೂ ಮಾಲಿಕರ ಕುಟುಂಬದ ಇತರೆ ಸದಸ್ಯರು ವಿಮೆಗೆ ನೋಂದಣಿ ಮಾಡಿಕೊಳ್ಳುವುದಾದರೆ, ಭೂ ಮಾಲಿಕರಿಂದ ನಿರಕ್ಷೇಪಣಾ ಪತ್ರ (ಎನ್ಒಸಿ) ಹಾಗೂ ಮೂಲ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಅಲ್ಲದೇ ಬಿತ್ತಿದ ಬೆಳೆಯು ಮಳೆಯಾಶ್ರಿತವೇ ಅಥವಾ ನೀರಾವರಿ ಬೆಳೆಯೇ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಬೆಳೆ ಕನಿಷ್ಠ 30 ದಿನಗಳಷ್ಟು ಬೆಳವಣಿಗೆ ಹೊಂದಿರಬೇಕು ಹಾಗೂ ಬಿತ್ತನೆ ಕುರಿತು ಸ್ವಯಂ ದೃಢೀಕರಣ ನೀಡಬೇಕು. ಸರ್ಕಾರದ ಬೆಳೆ ಸಮೀಕ್ಷೆ ಕಡ್ಡಾಯವಾಗಿರುವುದರಿಂದ ಬಿತ್ತನೆ ಮಾಡದ ಬೆಳೆಗೆ ವಿಮೆ ಮಾಡಿಸಿದರೆ ಯಾವುದೇ ಪರಿಹಾರಕ್ಕೆ ಅರ್ಹತೆ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಪ್ರತ್ಯೇಕವಾಗಿ ಅಂತಿಮ ದಿನಾಂಕ ನಿಗದಿಪಡಿಸಲಾಗಿದೆ. ಹೆಸರು ಹಾಗೂ ಹತ್ತಿ ಬೆಳೆಗಳಿಗೆ ಜುಲೈ 15 ಕೊನೆಯ ದಿನಾಂಕವಾಗಿದೆ. ಗೋವಿನಜೋಳ, ಸಜ್ಜೆ, ತೊಗರಿ, ಶೇಂಗಾ ಹಾಗೂ ಭತ್ತ ಬೆಳೆಗಳಿಗೆ ಜುಲೈ 31 ಅಂತಿಮ ದಿನಾಂಕವಾಗಿದ್ದು, ಸೂರ್ಯಕಾಂತಿ ಬೆಳೆಗಳಿಗೆ ಆಗಸ್ಟ್ 14ರವರೆಗೆ ನೋಂದಣಿ ಅವಕಾಶ ಕಲ್ಪಿಸಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಅನಿಶ್ಚಿತ ಹವಾಮಾನ ಹಾಗೂ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟದಿಂದ ರೈತರನ್ನು ರಕ್ಷಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಲ್ಲಿದ್ದು, ಜಿಲ್ಲೆಯ ಎಲ್ಲಾ ಅರ್ಹ ರೈತರು ಯೋಜನೆಯ ಸೌಲಭ್ಯ ಪಡೆಯುವಂತೆ ಕೃಷಿ ಇಲಾಖೆ ಮನವಿ ಮಾಡಿದೆ. ಕೊನೆಯ ಕ್ಷಣದ ತೊಂದರೆ ತಪ್ಪಿಸಲು ಮುಂಚಿತವಾಗಿ ನೋಂದಣಿ ಮಾಡಿಸಿಕೊಂಡು ಬೆಳೆಗಳಿಗೆ ವಿಮಾ ರಕ್ಷಣೆ ಪಡೆಯುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande