
ಗದಗ, 22 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ನರಗುಂದ ತಾಲೂಕು ಉಸ್ತುವಾರಿ ಕಾರ್ಯದರ್ಶಿಗಳಾದ ರಮೇಶ ಕಳಸದ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ನರಗುಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಧರ್ ಚಿನಗುಂಡಿ ಅವರು ಸುರಕೋಡ, ಹದಲಿ, ರೆಡ್ಡರನಾಗನೂರು ಹಾಗೂ ಶಿರೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ವೇಳೆ ಶಾಲೆಗಳ ಹಾನಿಗೊಳಗಾದ ಕೊಠಡಿಗಳನ್ನು ಪರಿಶೀಲಿಸಿದ ಅವರು, ಮಳೆಗಾಲದ ಸಂದರ್ಭದಲ್ಲಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಉಂಟಾಗುತ್ತಿದೆಯೇ ಹಾಗೂ ಕೊಠಡಿಗಳ ಸುರಕ್ಷತಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ಶಾಲಾ ಕೊಠಡಿಗಳ ಸುರಕ್ಷತೆ ಕುರಿತು ಶಾಲಾ ಮುಖ್ಯೋಪಾಧ್ಯಾಯರಿಂದ ವಿವರಗಳನ್ನು ಪಡೆದುಕೊಂಡರು.
ಇದೇ ವೇಳೆ ಶಿಕ್ಷಕರ ಹಾಜರಾತಿ ಪುಸ್ತಕ, ವಿದ್ಯಾರ್ಥಿಗಳ ಒಟ್ಟು ಹಾಜರಾತಿ ಹಾಗೂ ಸೋಮವಾರ ಶಾಲೆಗೆ ಹಾಜರಾದ ಮಕ್ಕಳ ಸಂಖ್ಯೆಯನ್ನು ಪರಿಶೀಲಿಸಿದರು. ಶಿಕ್ಷಕರು ತಮ್ಮ ಚಲನವಲನ ನೋಂದಣಿ (ಮೂವ್ಮೆಂಟ್ ರಿಜಿಸ್ಟರ್)ಯನ್ನು ನಿಯಮಿತವಾಗಿ ನವೀಕರಿಸಿಕೊಂಡು ಇರಬೇಕೆಂದು ಸೂಚಿಸಿದರು.
ಶಾಲಾ ಅಡುಗೆ ಸಿಬ್ಬಂದಿ ಅವರ ಜೊತೆ ಸಮಾಲೋಚನೆ ನಡೆಸಿದ ಇಓ ಅವರು ಬಿಸಿಯೂಟ ನಿರ್ವಹಣೆಯ ನಮೂನೆ-೩ ರಜಿಸ್ಟರ್ ನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ರೆಡ್ಡರ ನಾಗನೂರು ಗ್ರಾಮದ ಸೀತಮ್ಮ ದೊಡ್ಡನಗೌಡ್ರ ಪ್ರೌಢ ಶಾಲೆಯ ಅಡುಗೆ ಸಿಬ್ಬಂದಿ ನಮೂನೆ-೩ ರಜಿಸ್ಟರ್ ಅಪಡೇಟ್ ಮಾಡದೇ ಇರುವುದು ಇಓ ಅವರ ಗಮನಕ್ಕೆ ಬಂತು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ತಾಲೂಕಿನ ಎಲ್ಲ ಶಾಲೆಗಳಲ್ಲಿ ಅಡುಗೆ ಸಿಬ್ಬಂದಿಗಳು ನಿರ್ವಹಿಸುವ ನಮೂನೆ-೩ ರಜಿಸ್ಟರ್ ನ್ನು ಅಪಡೇಟ್ ಗೊಳಿಸಲು ಕ್ರಮವಹಿಸಿ ಅಂತ ತಿಳಿಸಿದರು
ನಂತರ ಹದಲಿ ಗ್ರಾಮದ 122ನೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ರಜೆ ಮೇಲಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿರುವುದು ಗಮನಕ್ಕೆ ಬಂತು. ಈ ಕುರಿತು ದೂರವಾಣಿ ಮೂಲಕ ಸಿಡಿಪಿಒ ಅವರೊಂದಿಗೆ ಮಾತನಾಡಿದ ಇಓ ಶ್ರೀಧರ್ ಚಿನಗುಂಡಿ ಅವರು, ಅನಧಿಕೃತವಾಗಿ ಹಾಜರಾತಿ ದಾಖಲಿಸಿರುವ ಕುರಿತು ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತಾಲೂಕು ಪಂಚಾಯಿತಿ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ನರಗುಂದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಇ.ಮೇಯೂಟಿ ಮತ್ತು ಶಾಲಾ ಸಿಬ್ಬಂದಿ ಅವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP