








ಬಳ್ಳಾರಿ, 22 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ವಲಯದ ವ್ಯಾಪ್ತಿಯ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ 381 ರೌಡಿಗಳ ಮನೆಗಳ ಮೇಲೆ 22 ಪೊಲೀಸ್ ತಂಡಗಳು ದಾಳಿ ನಡೆಸಿ, ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂದ್ರಾಳ್ನ ಐದು ಮನೆಗಳ ಮೇಲೆ ದಾಳಿ ನಡೆಸಿದಾಗ ಏರ್ಗನ್, ಖಾಲಿ ಬಾಂಡ್ ಪೇಪರ್ಗಳು, ಪ್ರಾಂಸರಿ ನೋಟುಗಳು ಸಿಕ್ಕಿದ್ದು ಪ್ರಕರಣ ದಾಖಲಾಗಿದೆ.
ಬಳ್ಳಾರಿ ವಲಯದ ಐಜಿಪಿ ಡಾ. ಹರ್ಷ ಅವರು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದ್ದು, ಬಳ್ಳಾರಿ ಜಿಲ್ಲೆಯ 104, ವಿಜಯನಗರ ಜಿಲ್ಲೆಯ 106, ಕೊಪ್ಪಳ ಜಿಲ್ಲೆಯ 68 ಮತ್ತು ರಾಯಚೂರು ಜಿಲ್ಲೆಯ 103 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪೈಕಿ ಅಂದ್ರಾಳುನ ಐದು ಮನೆಗಳಲ್ಲಿ ಏರ್ಗನ್, ಖಾಲಿ ಬಾಂಡ್ ಪೇಪರ್ಗಳು, ಪ್ರಾಂಸರಿ ನೋಟುಗಳು ಸಿಕ್ಕಿವೆ. ಉಳಿದಂತೆ ಎಲ್ಲಿಯೂ ಅಕ್ರಮ ಚಟುವಟಿಕೆಗಳು ನಡೆದ ಬಗ್ಗೆ - ಅಕ್ರಮವಾಗಿ ಆಯುಧಗಳನ್ನು ದಾಸ್ತಾನು ಮಾಡಿರುವ ಮಾಹಿತಿ ಸಿಕ್ಕಿಲ್ಲ ಎಂದರು.
ಬಳ್ಳಾರಿ ವಲಯ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ 16 ರೌಡಿಗಳು ಮನೆಗಳಲ್ಲಿ ಇರಲಿಲ್ಲ. ಮನೆಯಲ್ಲಿ ಇರದಿದ್ದ ರೌಡಿಗಳಿಗೆ ನೋಟೀಸ್ ನೀಡಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ 3841 ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಬಳ್ಳಾರಿ ವಲಯದಿಂದ 53 ಜನರನ್ನು ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, 10 ರೌಡಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ಅವರು ವಿವರಿಸಿದರು.
ರೌಡಿ ಶೀಟರ್ಗಳ ಮನೆಗಳಲ್ಲಿ ಶೋಧನಾ ಕಾರ್ಯಚರಣೆ ನಡೆಸಿ ರೌಡಿ ಆಸಾಮಿಗಳ ಚಲನವಲನ, ವೃತ್ತಿ, ಜೀವನ ನಿರ್ವಹಣೆ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಕಾನೂನಿನ ವಿರುದ್ದ ಚಟುವಟಿಕೆ ಸಂಬಂಧಿಸಿದ ಒಳಗೊಳ್ಳುವಿಕೆ ಸೇರಿದಂತೆ ಒಟ್ಟಾರೆ ರೌಡಿ ಅಸಾಮಿಗಳ ನಿಗಾವಣೆ ಇಡುವುದರ ಮೂಲಕ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.
ಬಳ್ಳಾರಿ ಜಿಲ್ಲೆ
ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ನಗರ, ಸಿರುಗುಪ್ಪ ಹಾಗೂ ತೋರಣಗಲ್ಲು ಉಪ-ವಿಭಾಗಗಳ ವ್ಯಾಪ್ತಿಯ 17 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಏಕಕಾಲಕ್ಕೆ 104 ಜನ ರೌಡಿ ಮನೆಗಳಿಗೆ ದಿಢೀರ್ ದಾಳಿ ಮಾಡಿ, 103 ಜನ ರೌಡಿಗಳ ಮನೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಎಪಿಎಂಸಿ ಪೊಲೀಸ್ ಠಾಣಾ ಸರಹದ್ದಿನ ಒಬ್ಬ ರೌಡಿ ಅಸಾಮಿ ಮನೆಯಿಂದ ಏರ್ಗನ್, ಖಾಲಿ ಬಾಂಡ್ ಪೇಪರ್ಗಳು, ಪ್ರಾಂಸರಿ ನೋಟುಗಳು ಸಿಕ್ಕಿವೆ. ಶೋಧನೆಯ ನಂತರ ಬಳ್ಳಾರಿ ನಗರದ ಡಿಎಆರ್ ಮೈದಾನದಲ್ಲಿ ರೌಡಿ ಅಸಾಮಿಗಳ ಕವಾಯತು ನಡೆಸಿ, ಪೊಲೀಸ್ ಇಲಾಖೆಯ ಇತ್ತೀಚಿನ ಬದಲಾವಣೆಗಳು, ಕಾನೂನಿನ ಬಿಗಿ ಕ್ರಮಗಳು ಹಾಗೂ ಎಚ್ಚರಿಕೆಗಳ ಕುರಿತು ಮಾಹಿತಿ ನೀಡಲಾಯಿತು ಎಂದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್