
ಬೆಂಗಳೂರು, 21 ಜೂನ್ (ಹಿ.ಸ.) :
ಆ್ಯಂಕರ್ : ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಸಂಘಟನೆ, ಗ್ಯಾರಂಟಿ ಯೋಜನೆಗಳು ಹಾಗೂ ಸಂವಿಧಾನ ಮೌಲ್ಯಗಳ ಕುರಿತು ಮಹತ್ವದ ಸಂದೇಶ ನೀಡಿದರು.
ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ, ಕಳೆದ ಆರು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೊಡುಗೆಯನ್ನು ಶ್ಲಾಘಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕಳೆದ ಮೂರು ವರ್ಷಗಳಲ್ಲಿ ₹1.40 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಜನಪರ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ಪ್ರತಿ ಪಕ್ಷಗಳು ಗ್ಯಾರಂಟಿ ಯೋಜನೆಗಳ ವಿರುದ್ಧ ಟೀಕೆ ಮಾಡಿದ್ದರೂ, ಕಾಂಗ್ರೆಸ್ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಿ ಜನರ ವಿಶ್ವಾಸ ಗಳಿಸಿದೆ ಎಂದು ಅವರು ತಿಳಿಸಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳ ಭರ್ಜರಿ ಗೆಲುವು ಸಾಧಿಸಿದ್ದು, ಇದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಒಗ್ಗಟ್ಟಿನ ಫಲ ಎಂದು ಹೇಳಿದರು.
ಬಿ.ಕೆ. ಹರಿಪ್ರಸಾದ್ ಅವರು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ಸೇರ್ಪಡೆಯಾಗಿ ಐದು ದಶಕಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದ ಸಿದ್ದರಾಮಯ್ಯ, ವಿದ್ಯಾರ್ಥಿ ನಾಯಕನಿಂದ ಹಿಡಿದು ಯುವ ಕಾಂಗ್ರೆಸ್, ಸೇವಾದಳ ಮತ್ತು ವಿವಿಧ ರಾಜ್ಯಗಳ ಉಸ್ತುವಾರಿಯಾಗಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ ಎಂದರು. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವ ಅವರು ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಬಹುತ್ವ, ಸಂವಿಧಾನದ ಆಶಯಗಳು ಮತ್ತು ಜಾತ್ಯಾತೀತ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದು ಸಿದ್ದರಾಮಯ್ಯ ಹೇಳಿದರು. ಜಿಲ್ಲಾ, ತಾಲ್ಲೂಕು ಹಾಗೂ ಬೂತ್ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ ಕಾಂಗ್ರೆಸ್ ಇತಿಹಾಸ ಮತ್ತು ಸಂವಿಧಾನದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸಂವಿಧಾನ ಮತ್ತು ಬಹುತ್ವದ ಮೌಲ್ಯಗಳನ್ನು ರಕ್ಷಿಸುವ ಹೋರಾಟ ಮುಂದುವರಿಯಬೇಕು ಎಂದರು. ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ಸುಳ್ಳು ಮಾಹಿತಿಗಳ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
2028ರ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಇತ್ತೀಚಿನ ಉಪಚುನಾವಣೆಗಳ ಗೆಲುವು ಜನರ ಬೆಂಬಲಕ್ಕೆ ಸಾಕ್ಷಿಯಾಗಿದೆ ಎಂದರು. ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವದಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಿ, 2029ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದು ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.