
ಬೆಂಗಳೂರು, 21 ಜೂನ್ (ಹಿ.ಸ.) :
ಆ್ಯಂಕರ್ : 2020ರಲ್ಲಿ ಕೋವಿಡ್ ಸಂಕಷ್ಟದ ನಡುವೆಯೇ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಕಳೆದ ಆರು ವರ್ಷಗಳ ಅವಧಿಯಲ್ಲಿ 75 ಲಕ್ಷಕ್ಕೂ ಅಧಿಕ ಸದಸ್ಯರನ್ನು ಕಾಂಗ್ರೆಸ್ ಕುಟುಂಬಕ್ಕೆ ಸೇರಿಸುವ ಮೂಲಕ ಪಕ್ಷದ ಸಂಘಟನೆಯನ್ನು ಬಲಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿಗಾಗಿ ಹಮ್ಮಿಕೊಂಡಿದ್ದ ಐತಿಹಾಸಿಕ ಮೇಕೆದಾಟು ಪಾದಯಾತ್ರೆ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ, ‘ನಮ್ಮ ಮತ–ನಮ್ಮ ಹಕ್ಕು–ನಮ್ಮ ಹೋರಾಟ’ ಅಭಿಯಾನ ಹಾಗೂ ಇತ್ತೀಚಿನ ನರೇಗಾ ಬಚಾವೋ ಸಂಗ್ರಾಮ ಸೇರಿದಂತೆ ಹಲವು ಹೋರಾಟಗಳಲ್ಲಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದ ಪರಿಣಾಮವೇ ಕಾಂಗ್ರೆಸ್ 2023ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ತಿಳಿಸಿದರು.
ತಮ್ಮ ಅಧ್ಯಕ್ಷೀಯ ಅವಧಿಯ ಸಾಧನೆಗಳು ವೈಯಕ್ತಿಕವಲ್ಲ, ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಒಗ್ಗಟ್ಟಿನ ಪರಿಶ್ರಮದ ಫಲ ಎಂದು ಅವರು ಹೇಳಿದರು.
ಬಿ.ಕೆ. ಹರಿಪ್ರಸಾದ್ ಮತ್ತು ತಾವು ಇಬ್ಬರೂ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಜೀವನ ಆರಂಭಿಸಿದವರು ಎಂದು ಸ್ಮರಿಸಿದ ಡಿ.ಕೆ. ಶಿವಕುಮಾರ್, “ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದ್ದೇವೆ. ಹರಿಪ್ರಸಾದ್ ಅವರು ನನಗಿಂತ ಹಿರಿಯರು. ಅವರು 1983ರಲ್ಲಿ ಹಾಗೂ ನಾನು 1985ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದೆವು. ಇಂದು ಸಮರ್ಥ ನಾಯಕ, ನಿಷ್ಠಾವಂತ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಸಂಘಟನೆಯ ಬಲವರ್ಧನೆಗೆ ದೇಶಾದ್ಯಂತ ದುಡಿದ ನಾಯಕನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಸ್ತಾಂತರಿಸುತ್ತಿರುವುದು ಸಂತಸ ತಂದಿದೆ” ಎಂದರು.
“ಸರ್ಕಾರ ಮತ್ತು ಪಕ್ಷ ಸಂಪೂರ್ಣವಾಗಿ ಹರಿಪ್ರಸಾದ್ ಅವರೊಂದಿಗೆ ನಿಲ್ಲಲಿದೆ. ಇಂದು ನಾನು ಮುಖ್ಯಮಂತ್ರಿಯಾಗಿರಬಹುದು. ಆದರೆ ಮೂಲತಃ ನಾನು ಸಾಮಾನ್ಯ ಕಾರ್ಯಕರ್ತ. ಕಾರ್ಯಕರ್ತನಾಗಿ ಪಕ್ಷದ ಸಂಘಟನೆಗೆ ಕೈಜೋಡಿಸುತ್ತೇನೆ” ಎಂದು ಹೇಳಿದರು.
ಮುಂದಿನ ಚುನಾವಣಾ ಗುರಿಗಳನ್ನು ಉಲ್ಲೇಖಿಸಿದ ಅವರು, “2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕು. 2029ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಮಂತ್ರಿಯನ್ನಾಗಿ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು” ಎಂದು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.