

ಕೊಪ್ಪಳ, 21 ಜೂನ್ (ಹಿ.ಸ.) :
ಆ್ಯಂಕರ್ : 12ನೇ ಯೋಗ ದಿನಾಚರಣೆಯ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಸರ್ವಯೋಗ ಸಂಸ್ಥೆಗಳ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಯೋಗ ಜಾಥಾ ಮೂಲಕ ವಿಶೇಷ ಅರಿವು ಮೂಡಿಸಲಾಯಿತು.
ಕೊಪ್ಪಳ ನಗರದ ಶ್ರೀ ಗವಿಮಠ ಆವರಣದಿಂದ ನಡೆದ ಯೋಗ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಪಿ.ಬಿ.ಹಿರೇಗೌಡರ ಅವರು ಪತಂಜಲಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಜೂನ್ 21ರಂದು ಭಾರತ ದೇಶಾದ್ಯಂತ ಮತ್ತು ಜಗತ್ತಿನ 177 ರಾಷ್ಟ್ರಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ವರ್ಷದ ಘೋಷವಾಕ್ಯವು ``ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ'' ಎಂಬುವುದಾಗಿದ್ದು, ಇದರ ಭಾಗವಾಗಿ ಇಂದು ಜಿಲ್ಲಾ ಆಯುಷ್ ಇಲಾಖೆ, ಜಿಲ್ಲೆಯ ವಿವಿಧ ಆಯುರ್ವೇಧ ಮಹಾವಿದ್ಯಾಲಯಗಳು ಮತ್ತು ಸರ್ವಯೋಗ ಸಂಸ್ಥೆಗಳ ಸಹಯೋಗದಲ್ಲಿ ಯೋಗಾ ಜಾಥಾ ಮೂಲಕ ಸಾರ್ವಜನಿಕರಲ್ಲಿ ಯೋಗದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಸುಮಾರು 400 ದಿನಗಳಿಂದ ``ಯೋಗ ಭಾರತ-365'' ಕಾರ್ಯಕ್ರಮವನ್ನು ಪ್ರತಿನಿತ್ಯ ಬೆಳಿಗ್ಗೆ 5.30 ರಿಂದ 7 ಗಂಟೆಯವರೆಗೆ ಆಚರಿಸುತ್ತಿರುವುದು ಇಡೀ ರಾಜ್ಯಾದ್ಯಂತ ಹೆಸರು ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣ ಮೂರ್ತಿ ದೇಸಾಯಿ, ಶ್ರೀ ಗವಿಸಿದ್ದೇಶ್ವರ ಆಯುರ್ವೇಧ ಮಹಾವಿದ್ಯಾಲಯದ ಪ್ರಾಶುಂಪಾಲರಾದ ಡಾ. ಸಾಲಿಮಠ, ಕೊಪ್ಪಳ ಜಿಲ್ಲೆಯ ಆಯುμï ವೈದ್ಯಾಧಿಕಾರಿಗಳಾದ ಡಾ. ಯಮನಪ್ಪ ಶಿರವಾರ, ಡಾ. ಗುರುರಾಜ್ ಉಮಚಗಿ, ಡಾ. ವಿ.ಆರ್ ತಾಳಿಕೋಟಿ, ಡಾ. ಶರಣಪ್ಪ ಹೈದ್ರಿ, ಡಾ. ರಾಜಶೇಖರ ನಾರಿನಾಳ, ಡಾ. ಕವಿತಾ ಹೆಚ್.ಎಫ್. ಹಾಗೂ ಇತರೆ ವೈದ್ಯಾಧಿಕಾರಿಗಳು, ಶ್ರೀ ಗವಿಸಿದ್ದೇಶ್ವರ, ನಿಂಗೋಜಿ ಮತ್ತು ಅಗಸ್ತ್ಯ ಆಯುರ್ವೇಧ ಮಹಾವಿದ್ಯಾಲಯ ವೈದ್ಯಾಧಿಕಾರಿಗಳು ಹಾಗೂ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಆಯುμï ಇಲಾಖೆ ಸಿಬ್ಬಂದಿ, ಸರ್ವಯೋಗ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಗಮನ ಸೆಳೆದ ಯೋಗ ಜಾಥ: ಯೋಗ ಜಾಥವು ಶ್ರೀ ಗವಿಮಠದ ಆವರಣದಿಂದ ಪ್ರಾರಂಭಗೊಂಡು ಗಡಿಯಾರ ಕಂಬದಿಂದ ಅಶೋಕ ಸರ್ಕಲ್ ಮೂಲಕ ತಾಲೂಕು ಕ್ರೀಡಾಂಗಣದವರೆಗೆ ನಡೆಯಿತು. ಜಾಥದಲ್ಲಿ ಶ್ರೀ ಗವಿಸಿದ್ದೇಶ್ವರ ಆಯುರ್ವೇಧ ಮಹಾವಿದ್ಯಾಲಯ, ನಿಂಗೋಜಿ ಆಯುರ್ವೇಧ ಮಹಾವಿದ್ಯಾಲಯ, ಅಗಸ್ತ್ಯ ಆಯುರ್ವೇಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜಾಥದಲ್ಲಿ ಯೋಗ ಮಾಡಿ ಸದಾ ನಗುನಗುತ್ತಾ ಇರಿ, ಯೋಗ ಅಳವಡಿಸೋಣ ಸುಂದರ ಜೀವನ ಕಟ್ಟೋಣ, ಯೋಗ ನಮ್ಮ ಸಂಸ್ಕøತಿ- ಆರೋಗ್ಯ ನಮ್ಮ ಹಕ್ಕು, ಯೋಗಕ್ಕೆ ಕೈ ಜೋಡಿಸಿ ಆರೋಗ್ಯದತ್ತ ಹೆಜ್ಜೆ ಇಡಿ, ಹೀಗೆ ಯೋಗದ ಮಹತ್ವವನ್ನು ಸಾರುವ ಇತರೆ ಸಂದೇಶ ಫಲಕಗಳು ಎಲ್ಲರ ಗಮನ ಸೆಳೆದವು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್