
ಬೆಂಗಳೂರು, 21 ಜೂನ್ (ಹಿ.ಸ.) :
ಆ್ಯಂಕರ್ : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಡಿ.ಕೆ. ಶಿವಕುಮಾರ್ ಪರ ಪದೇ ಪದೇ ಘೋಷಣೆಗಳು ಮೊಳಗುತ್ತಿದ್ದ ಹಿನ್ನೆಲೆಯಲ್ಲಿ ಖರ್ಗೆ ತಾಳ್ಮೆ ಕಳೆದುಕೊಂಡು ಕಾರ್ಯಕರ್ತರಿಗೆ ತೀವ್ರ ತರಾಟೆ ತೆಗೆದುಕೊಂಡರು.
ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕೆಲ ಕಾರ್ಯಕರ್ತರು ಮತ್ತು ಡಿ.ಕೆ. ಶಿವಕುಮಾರ್ ಅಭಿಮಾನಿಗಳು ನಿರಂತರವಾಗಿ “ಡಿಕೆಶಿ, ಡಿಕೆಶಿ” ಎಂದು ಘೋಷಣೆ ಹಾಕಿದರು. ಸ್ವತಃ ಡಿ.ಕೆ. ಶಿವಕುಮಾರ್ ಶಾಂತವಾಗಿರಲು ಮನವಿ ಮಾಡಿದರೂ ಕಾರ್ಯಕರ್ತರು ಘೋಷಣೆ ಮುಂದುವರಿಸಿದರು. ಇದರಿಂದ ಭಾಷಣಕ್ಕೆ ಅಡಚಣೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿ ಹೀಗೆ ಕೂಗಿದರೆ ದೇಶ ನಿಮ್ಮ ಕೈಗೆ ಬಂದಂತಾಗುವುದಿಲ್ಲ. ಯೂಸ್ಲೆಸ್ ಫೆಲೋಸ್,” ಎಂದು ಖರ್ಗೆ ಗದರಿಸಿದರು. ಕಾಂಗ್ರೆಸ್ ಪಕ್ಷದ ಸಭೆಯಿದು, ಯಾವುದೇ ಒಬ್ಬ ವ್ಯಕ್ತಿಯ ಸಭೆಯಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಇದು ಪಕ್ಷವನ್ನು ಒಂದುಗೂಡಿಸುವ ಕಾರ್ಯಕ್ರಮ. ಒಬ್ಬರ ಹೆಸರನ್ನು ಮಾತ್ರ ಕೂಗುವುದರಿಂದ ಉಳಿದ ನಾಯಕರು ಕಸ ಗುಡಿಸಲು ಬಂದವರೇ?” ಎಂದು ಪ್ರಶ್ನಿಸಿದರು.
ಪಕ್ಷದಲ್ಲಿ ವ್ಯಕ್ತಿಪೂಜೆಗೆ ಅವಕಾಶ ಇಲ್ಲ. ಯಾರೇ ಎಷ್ಟೇ ದೊಡ್ಡ ನಾಯಕರಾಗಿದ್ದರೂ ಪಕ್ಷವೇ ಮುಖ್ಯ ಎಂದು ಖರ್ಗೆ ಹೇಳಿದರು. ಕಾಂಗ್ರೆಸ್ ಪಕ್ಷವೇ ನಾಯಕರಿಗೆ ಶಕ್ತಿ ನೀಡಿದ್ದು, ಸಂಘಟನೆ ಮತ್ತು ಶಿಸ್ತು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಮಧ್ಯೆ ಘೋಷಣೆ ಹಾಕುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಖರ್ಗೆ, ಕಾರ್ಯಕ್ರಮದ ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.