
ಬೆಂಗಳೂರು, 20 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಕೃಷಿ ಹಾಗೂ ಶಿಕ್ಷಣ ಇಲಾಖೆಗೆ ಪೂರ್ಣ ಪ್ರಮಾಣದ ಸಚಿವರನ್ನು ನೇಮಿಸದಿರುವುದನ್ನು ಖಂಡಿಸಿ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, “ಅಡ್ಡಮತದಾನ ಮಾಡಿಸುವಷ್ಟು ಸುಲಭವಲ್ಲ ಆಡಳಿತ ನಡೆಸುವುದು. ಇದು ಅಡ್ಡಕಸುಬಿ ಕಾಂಗ್ರೆಸ್ ಸರ್ಕಾರ” ಎಂದು ಟೀಕಿಸಿರುವ ಅವರು, ವಿರೋಧ ಪಕ್ಷದ ಶಾಸಕರನ್ನು ಸೆಳೆಯಲು ಹಾಗೂ ಅಡ್ಡಮತದಾನ ಮಾಡಿಸಲು ತೋರಿಸುವ ಉತ್ಸಾಹವನ್ನು ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯಲ್ಲಿ ಸರ್ಕಾರ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಜನರಲ್ಲಿ ಮೂಡಿದ್ದು, ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವುದಕ್ಕಿಂತ ಗ್ಯಾರಂಟಿ ಯೋಜನೆಗಳಲ್ಲಿನ ಅಕ್ರಮ ಆರೋಪಗಳನ್ನು ಮುಚ್ಚಿಹಾಕುವುದರಲ್ಲೇ ನಿರತವಾಗಿದೆ ಎಂದು ಅಶೋಕ್ ದೂರಿದ್ದಾರೆ.
ಮುಂಗಾರು ವೈಫಲ್ಯದ ಭೀತಿಯಿಂದ ರಾಜ್ಯದ ಹಲವು ಭಾಗಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಪ್ರಮಾಣ ಕುಸಿದಿದ್ದು, ರೈತರು ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಇಲಾಖೆಗೆ ಪೂರ್ಣ ಪ್ರಮಾಣದ ಸಚಿವರೇ ಇಲ್ಲದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಶಾಲೆಗಳು ಆರಂಭವಾಗಿ ತಿಂಗಳಾದರೂ ಶಿಕ್ಷಣ ಇಲಾಖೆಗೆ ಸಚಿವರಿಲ್ಲ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದ್ದು, ಅತಿಥಿ ಶಿಕ್ಷಕರ ನೇಮಕಾತಿಯೂ ನಡೆದಿಲ್ಲ. ವಿಶೇಷವಾಗಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ ಪ್ರಶ್ನೆ ಎತ್ತಿರುವ ಅಶೋಕ್, “ನಿಮಗೆ ಸರ್ಕಾರ ನಡೆಸುವ ಆಸಕ್ತಿಯಿದೆಯೇ, ಅಥವಾ ಕೇವಲ ಅಧಿಕಾರದ ರಾಜಕೀಯವೇ ಮುಖ್ಯವೇ?” ಎಂದು ಪ್ರಶ್ನಿಸಿದ್ದಾರೆ.
“ರೈತರ ಸಂಕಷ್ಟಕ್ಕೆ ಸಚಿವರಿಲ್ಲ, ಮಕ್ಕಳ ಭವಿಷ್ಯಕ್ಕೆ ಸಚಿವರಿಲ್ಲ, ಆಡಳಿತಕ್ಕೆ ದಿಕ್ಕಿಲ್ಲ. ಆದರೆ ಅಧಿಕಾರಕ್ಕಾಗಿ ಕಾಂಗ್ರೆಸ್ನಲ್ಲಿ ಹಗ್ಗಜಗ್ಗಾಟ ಮಾತ್ರ ಮುಂದುವರಿದಿದೆ. ಗ್ಯಾರಂಟಿ ಸರ್ಕಾರ ಈಗ ಖಾತೆ ಇಲ್ಲದ ಸರ್ಕಾರ, ಜವಾಬ್ದಾರಿ ಇಲ್ಲದ ಸರ್ಕಾರ ಮತ್ತು ದಿಕ್ಕಿಲ್ಲದ ಸರ್ಕಾರವಾಗಿ ಬದಲಾಗಿದೆ” ಎಂದು ಅವರು ಟೀಕಿಸಿದ್ದಾರೆ.
ಕೃಷಿ ಮತ್ತು ಶಿಕ್ಷಣ ಇಲಾಖೆಗಳಿಗೆ ತಕ್ಷಣ ಪೂರ್ಣ ಪ್ರಮಾಣದ ಸಚಿವರನ್ನು ನೇಮಿಸಿ, ರೈತರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.