
ಬಾಗಲಕೋಟೆ, 20 ಜೂನ್ (ಹಿ.ಸ.) :
ಆಂಕರ್ : 2028ರ ವಿಧಾನ ಸಭಾ ಚುನಾವಣೆಯಲ್ಲಿ ಹಾಲಿ ಶಾಸಕ ಸಿದ್ದು ಸವದಿ ಅವರನ್ನು ಸೋಲಿಸದಿದ್ದರೆ ತೇರದಾಳ ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ನೇಕಾರ ಮುಖಂಡ ರಾಜು ಅಂಬಲಿ ಹೇಳಿಕೆ ನೀಡಿದ್ದಾರೆ.
ತೇರದಾಳ ಕ್ಷೇತ್ರದ ನಾನಾ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳ ನಿಧಾನ ಗತಿ ಹಾಗೂ ಜನರ ನಿರೀಕ್ಷೆಗಳ ಕುರಿತು ಮಾತನಾಡಿದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜನರು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
“ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವಂತಹ ನಾಯಕತ್ವದ ಅಗತ್ಯವಿದೆ. ಜನರ ಸಮಸ್ಯೆಗಳಿಗೆ ಆದ್ಯತೆ ನೀಡುವ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು, ಇಲ್ಲವಾದರೆ ತೇರದಾಳ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿಯುವ ಸಾಧ್ಯತೆ ಇದೆ” ಎಂದು ರಾಜು ಅಂಬಲಿ ಹೇಳಿದರು.
ನೇಕಾರ ಸಮುದಾಯ ಸೇರಿದಂತೆ ನಾನಾ ವರ್ಗಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನರು ಅಭಿವೃದ್ಧಿ, ಜನಪರ ಆಡಳಿತ ಹಾಗೂ ಸಮಸ್ಯೆಗಳ ಪರಿಹಾರವನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ರಾಜು ಅಂಬಲಿ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ತೇರದಾಳ ಕ್ಷೇತ್ರದ ಮುಂದಿನ ಚುನಾವಣಾ ರಾಜಕೀಯದ ಬಗ್ಗೆ ಕುತೂಹಲ ಮೂಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande