
ಬಾಗಲಕೋಟೆ, 19 ಜೂನ್ (ಹಿ.ಸ.) :
ಆಂಕರ್ : ಭಾರತದ ಷೇರುಪೇಟೆ ಮತ್ತು ಹಣಕಾಸು ಮಾರುಕಟ್ಟೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಹಾಗೂ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಮಹತ್ವದ ಉದ್ದೇಶದಿಂದ ನಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್ (NISM) ಮತ್ತು ಬಿ.ವಿ.ವಿ. ಸಂಘದ ನಡುವೆ ಮಹತ್ವದ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಲಾಯಿತು.
ಬಾಗಲಕೋಟೆಯ ಬಿ.ವಿ.ವಿ. ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್ಐಎಸ್ಎಂನ ಪಾಲುದಾರಿಕೆ ಮತ್ತು ಮಾರುಕಟ್ಟೆ ವಿಭಾಗ-2ರ ಜನರಲ್ ಮ್ಯಾನೇಜರ್ ಸಂಜೀವ್ ಬಜಾಜ್ ಅವರು ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಅಧಿಕೃತವಾಗಿ ಸಹಭಾಗಿತ್ವಕ್ಕೆ ಚಾಲನೆ ನೀಡಿದರು.
ಈ ಒಡಂಬಡಿಕೆಯಡಿ ಬಿ.ವಿ.ವಿ. ಸಂಘದ ಅಧೀನದಲ್ಲಿರುವ ಸುಮಾರು 11 ಶಿಕ್ಷಣ ಸಂಸ್ಥೆಗಳನ್ನು ಒಳಗೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಷೇರು ಮಾರುಕಟ್ಟೆ, ಹೂಡಿಕೆ ನಿರ್ವಹಣೆ, ಹಣಕಾಸು ಸೇವೆಗಳು ಹಾಗೂ ಸೆಕ್ಯೂರಿಟೀಸ್ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ.
ಬಿ.ವಿ.ವಿ. ಸಂಘದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ವಿದ್ಯಾಗಿರಿ, ಬಾಗಲಕೋಟೆ ಸಂಸ್ಥೆಯು ಎನ್ಐಎಸ್ಎಂ ಪರೀಕ್ಷಾ ಕೇಂದ್ರದ ಸಮನ್ವಯ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ಎನ್ಐಎಸ್ಎಂ ಪ್ರಮಾಣಪತ್ರ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಹಾಗೂ ವೃತ್ತಿಪರ ಅರ್ಹತೆಗಳನ್ನು ಪಡೆಯಲು ಉತ್ತಮ ಅವಕಾಶ ದೊರೆಯಲಿದೆ.
ಕಾರ್ಯಕ್ರಮದಲ್ಲಿ ಬಿ.ವಿ.ವಿ. ಸಂಘದ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಗುರುಬಸವ ಎಸ್. ಸೂಳಿಭಾವಿ ಹಾಗೂ ಬಿ.ವಿ.ವಿ. ಸಂಘದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಿರ್ದೇಶಕರಾದ ಡಾ. ಪ್ರಕಾಶ ಕೆ. ವಡವಡಗಿ ಉಪಸ್ಥಿತರಿದ್ದರು.
ಈ ಸಹಭಾಗಿತ್ವದ ಮೂಲಕ ವಿದ್ಯಾರ್ಥಿಗಳಿಗೆ ಹಣಕಾಸು ಮಾರುಕಟ್ಟೆಯ ಪ್ರಾಯೋಗಿಕ ಜ್ಞಾನ, ಹೂಡಿಕೆ ಕ್ಷೇತ್ರದ ಅರಿವು, ವೃತ್ತಿಪರ ಕೌಶಲ್ಯ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಒಡಂಬಡಿಕೆ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande