ಜೆ.ಕೆ. ಸಿಮೆಂಟ್ ಕಾರ್ಖಾನೆ ಮಾಲಿನ್ಯ ವಿರುದ್ಧ ಮುದ್ದಾಪುರದಲ್ಲಿ ರೈತರ ಅನಿರ್ದಿಷ್ಟಾವಧಿ ಧರಣಿ ಆರಂಭ
ರಿ
Protest


ಬಾಗಲಕೋಟೆ, 19 ಜೂನ್ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರದಲ್ಲಿರುವ ಜೆ.ಕೆ. ಸಿಮೆಂಟ್ ಕಾರ್ಖಾನೆಯಿಂದ ಉಂಟಾಗುತ್ತಿರುವ ಮಾಲಿನ್ಯ ವಿರೋಧಿಸಿ ರೈತರು ಹಾಗೂ ಗ್ರಾಮಸ್ಥರು ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ. ಕಾರ್ಖಾನೆಯಿಂದ ಹೊರಬರುತ್ತಿರುವ ದಟ್ಟವಾದ ಕರಿ ಧೂಳು ಹಾಗೂ ಹೊಗೆಯಿಂದಾಗಿ ಜನಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ನೂರಾರು ರೈತರು ಕಾರ್ಖಾನೆಯ ಮುಖ್ಯ ದ್ವಾರದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಮುದ್ದಾಪುರ ಸೇರಿದಂತೆ ನಿಂಗಾಪುರ, ಬೊಮ್ಮಣ ಬುದ್ನಿ, ಮೆಟಗುಡ್ಡ, ಹಲಕಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರು ಕಳೆದ ಹಲವು ವರ್ಷಗಳಿಂದ ಕಾರ್ಖಾನೆ ಮಾಲಿನ್ಯದ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ರಾತ್ರಿ ವೇಳೆ ಕಾರ್ಖಾನೆಯಿಂದ ಹೊರಬಿಡಲಾಗುತ್ತಿರುವ ಕರಿ ಧೂಳು ಮನೆಗಳು, ಹೊಲಗಳು ಹಾಗೂ ಪರಿಸರವನ್ನು ಆವರಿಸುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಾರ್ಖಾನೆಯ ಮಾಲಿನ್ಯದಿಂದಾಗಿ ಸುತ್ತಮುತ್ತಲಿನ ಕೃಷಿ ಜಮೀನುಗಳ ಬೆಳೆಗಳು ಹಾನಿಗೊಳಗಾಗುತ್ತಿವೆ. ಬೆಳೆಗಳ ಮೇಲೆ ಧೂಳಿನ ಪದರ ಬೀಳುವುದರಿಂದ ಉತ್ಪಾದನೆ ಕುಸಿಯುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ದೂರಿದ್ದಾರೆ. ಅಲ್ಲದೆ, ಮಾಲಿನ್ಯದಿಂದ ಉಸಿರಾಟ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ.

ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತಿರುವ ಗ್ರಾಮಸ್ಥರು ಇದೀಗ ಕಾರ್ಖಾನೆಯ ಎದುರೇ ಧರಣಿ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದರ ನಡುವೆ ಜೆ.ಕೆ. ಸಿಮೆಂಟ್ ಕಾರ್ಖಾನೆ ಹೆಚ್ಚುವರಿ ಘಟಕ ಸ್ಥಾಪನೆಗೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಮಾಲಿನ್ಯ ಹಾಗೂ ಪರಿಸರ ಸಮಸ್ಯೆಗಳಿಂದ ಬಳಲುತ್ತಿರುವ ಗ್ರಾಮಗಳ ಮೇಲೆ ಹೆಚ್ಚುವರಿ ಘಟಕದಿಂದ ಮತ್ತಷ್ಟು ದುಷ್ಪರಿಣಾಮ ಉಂಟಾಗಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಸಿಮೆಂಟ್ ಕಲ್ಲಿನ ಕ್ವಾರಿಗಳಲ್ಲಿ ನಡೆಯುತ್ತಿರುವ ಭಾರಿ ಗಣಿಗಾರಿಕೆಯಿಂದಾಗಿ ರೈತರ ಜಮೀನುಗಳಿಗೆ ಹಾನಿಯಾಗುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ ಎಂದು ಆರೋಪಿಸಲಾಗಿದೆ. ಕೃಷಿ, ಪರಿಸರ ಮತ್ತು ಜನರ ಆರೋಗ್ಯದ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿರುವ ರೈತರು, ಮಾಲಿನ್ಯ ನಿಯಂತ್ರಣ ಹಾಗೂ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande