
ಬೆಂಗಳೂರು, 19 ಜೂನ್ (ಹಿ.ಸ.) :
ಆ್ಯಂಕರ್ : ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನವು ಬಿಜೆಪಿ–ಜೆಡಿಎಸ್ ಮೈತ್ರಿಗೆ ದೊಡ್ಡ ಆಘಾತ ಉಂಟು ಮಾಡಿದ್ದು, ಪಕ್ಷ ಹಾಗೂ ಮೈತ್ರಿಗೆ ದ್ರೋಹ ಬಗೆದವರ ವಿರುದ್ಧ ಯಾವುದೇ ಕಾರಣಕ್ಕೂ ಕ್ಷಮೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. ದ್ರೋಹಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪರಿಷತ್ ಚುನಾವಣೆಯ ಫಲಿತಾಂಶ ಆಘಾತಕಾರಿಯಾಗಿದೆ ಎಂದು ಹೇಳಿದರು. ಚುನಾವಣೆಯಲ್ಲಿ ಜೆಡಿಎಸ್ನಿಂದ ಆರು ರಿಂದ ಏಳು ಮಂದಿ ಹಾಗೂ ಬಿಜೆಪಿಯಿಂದ ನಾಲ್ಕು ರಿಂದ ಐದು ಮಂದಿ ಶಾಸಕರು ಅಡ್ಡ ಮತದಾನ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಈ ಘಟನೆ ನಡೆಯಬಾರದಿತ್ತು. ಆದರೆ ದುರಾದೃಷ್ಟವಶಾತ್ ನಡೆದಿದೆ. ಪಕ್ಷದ ಬೆನ್ನಿಗೆ ಇರಿದು ರಾಜಕೀಯ ಆಟ ಆಡಿದವರು ಯಾರು ಎಂಬುದರ ಕುರಿತು ನಮ್ಮ ಬಳಿ ಈಗಾಗಲೇ ಸಾಕಷ್ಟು ಮಾಹಿತಿ ಇದೆ. ಇವತ್ತು ಅಥವಾ ನಾಳೆಯೊಳಗೆ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದರು.
ಅಡ್ಡ ಮತದಾನದಿಂದ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತೀವ್ರ ಬೇಸರ ಮತ್ತು ನೋವಾಗಿದೆ. ನಮಗೂ ಅಷ್ಟೇ ನೋವಾಗಿದೆ. ಈ ರಾಜಕೀಯ ದ್ರೋಹವನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.
ಪಕ್ಷದ ರಾಷ್ಟ್ರೀಯ ನಾಯಕರ ಭೇಟಿಗೆ ಈಗಾಗಲೇ ಸಮಯ ಕೋರಿದ್ದೇನೆ. ಇಂದು ಅಥವಾ ಸೋಮವಾರ ಅವಕಾಶ ದೊರೆತ ಕೂಡಲೇ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುತ್ತೇನೆ. ಪಕ್ಷದಲ್ಲಿದ್ದುಕೊಂಡೇ ದ್ರೋಹ ಬಗೆದಿರುವವರ ಕುರಿತು ಸಂಪೂರ್ಣ ಮಾಹಿತಿಯನ್ನು ಹೈಕಮಾಂಡ್ಗೆ ನೀಡಲಾಗುವುದು ಎಂದು ಹೇಳಿದರು.
ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ಅಡ್ಡ ಮತದಾನದ ಕುರಿತು ವರಿಷ್ಠರೊಂದಿಗೆ ಚರ್ಚೆ ನಡೆಸಿ, ದ್ರೋಹಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.