

ಬಳ್ಳಾರಿ, 19 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ವ್ಯಾಪ್ತಿಗೆ ಬರುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿರುವ ಎಲೆಕ್ಟೋರಲ್ ಲಿಟರಸಿ ಕ್ಲಬ್ ಗಳ ಮೂಲಕ ಕಡ್ಡಾಯವಾಗಿ ಸ್ವೀಪ್ ಚಟುವಟಿಕೆಗಳನ್ನು ಆಯೋಜಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಹೇಳಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಎಲೆಕ್ಟೋರಲ್ ಲಿಟರಸಿ ಕ್ಲಬ್ ಗಳ ಮೂಲಕ ಸ್ವೀಪ್ ಚಟುವಟಿಕೆ ಆಯೋಜಿಸುವ ಕುರಿತು ನಗರದ ಜಿಲ್ಲಾ ಪಂಚಾಯತ್ ನ ಹಳೆಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವ ಜನತೆಯಲ್ಲಿ, ವಿಶೇಷವಾಗಿ ಪ್ರಥಮ ಬಾರಿಗೆ ಮತದಾನ ಮಾಡುವವರಲ್ಲಿ (18 ವರ್ಷ ತುಂಬಲಿರುವ ವಿದ್ಯಾರ್ಥಿಗಳಲ್ಲಿ) ಚುನಾವಣಾ ಸಾಕ್ಷರತೆಯನ್ನು ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯ ಹಂತದಲ್ಲಿ ವಿದ್ಯಾರ್ಥಿಗಳನ್ನು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ, ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ಈ ಕ್ಲಬ್ಗಳು ನೆರವಾಗಲಿವೆ ಎಂದು ತಿಳಿಸಿದರು.
18 ವರ್ಷ ತುಂಬಿದ ಅಥವಾ ತುಂಬಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ವಿಶೇಷ ನೋಂದಣಿ ಡ್ರೈವ್ಗಳನ್ನು ನಡೆಸುವುದು. ಮತದಾನದ ಮಹತ್ವ ಸಾರುವ ಪ್ರಬಂಧ ಸ್ಪರ್ಧೆ, ಭಾಷಣ, ಚಿತ್ರಕಲೆ, ರಂಗೋಲಿ ಹಾಗೂ ಬೀದಿ ನಾಟಕಗಳನ್ನು ಆಯೋಜಿಸುವುದು. ವಿದ್ಯಾರ್ಥಿಗಳ ಮೂಲಕ ಅವರ ಪೆÇೀಷಕರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುವುದು ಇಎಲ್ಸಿ ಸಂಯೋಜಕರ ಚಟುವಟಿಕೆಗಳಾಗಿವೆ ಎಂದು ಅವರು ತಿಳಿಸಿದರು. ಹಾಗಾಗಿ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿ ಇಎಲ್ಸಿ ಕ್ಲಬ್ಗಳು ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾದ್ಯಂತ ಈ ತಿಂಗಳ 22 ರಂದು ಹಬ್ಬದ ವಾತಾವರಣದಲ್ಲಿ ವಿಶೇಷ ಗ್ರಾಮ ಸಭೆ'ಯನ್ನು ಆಯೋಜಿಸಲಾಗುತ್ತಿದ್ದು, ಅಂದು ಕನಿಷ್ಠ ಒಂದು ಗಂಟೆಯ ಅವಧಿಗೆ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಹಾಜರಿದ್ದು, ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ಈ ವಿಶೇಷ ಅಭಿಯಾನದ ಮೂಲಕ ಎಸ್ಎಸ್ಐಆರ್ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಯುವ ಮತದಾರ ಅಥವಾ ಅನಕ್ಷರಸ್ಥ ಕುಟುಂಬದ ಸದಸ್ಯನ ಹೆಸರು ಸೇರ್ಪಡೆಯಾದರೂ, ಅಥವಾ ಅನಗತ್ಯ ಹೆಸರುಗಳನ್ನು ಕೈಬಿಟ್ಟರೂ ಅದು ಈ ಕಾರ್ಯಕ್ರಮದ ಬಹುದೊಡ್ಡ ಯಶಸ್ಸು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರ ಶಿವಲಿಂಗ ರೆಡ್ಡಿ ಅವರು ಮಾತನಾಡಿ, ರಾಜ್ಯದಲ್ಲಿ ಹೊಸ ಮತದಾರರ ಪಟ್ಟಿ ಸಿದ್ಧಪಡಿಸುವ ನಿಟ್ಟಿನಲ್ಲಿ ಮಹತ್ವದ ‘ಎಸ್ಐಆರ್’ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಹಿಂದೆ ಕೇವಲ ಮತದಾರರ ಪಟ್ಟಿ ನವೀಕರಣ, ಹೆಸರು ತೆಗೆದುಹಾಕುವುದು ಹಾಗೂ ಸ್ಥಳಾಂತರದಂತಹ ಅಪ್ಡೇಶನ್ಗಳಿಗಾಗಿ ‘ಎಸ್ಎಸ್ಆರ್’ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಆದರೆ, ಪ್ರಸ್ತುತ ಜಾರಿಯಲ್ಲಿರುವ ಎಸ್ಐಆರ್ ಪ್ರಕ್ರಿಯೆಯು ಸಂಪೂರ್ಣವಾಗಿ ಹೊಸ ಮತದಾರರ ಪಟ್ಟಿಯನ್ನು ತಯಾರಿಸುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಇಎಲ್ಸಿ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶಾಲಾ-ಕಾಲೇಜುಗಳ ಅಧಿಕಾರಿಗಳು ಕೈಜೋಡಿಸಬೇಕು ಎಂದು ಹೇಳಿದರು.
ಹೊಸ ಮತದಾರರ ಪಟ್ಟಿ ತಯಾರಿಕೆಗೆ 2025 ರ ವೋಟರ್ ಲಿಸ್ಟ್ ಅನ್ನು ಆಧಾರವಾಗಿಟ್ಟುಕೊಂಡು ‘ಪ್ರೀ-ಪ್ರಿಂಟೆಡ್’ ಫಾರ್ಮ್ಗಳನ್ನು ಸಿದ್ಧಪಡಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಶೀಘ್ರದಲ್ಲೇ ಮನೆ ಮನೆಗೆ ಭೇಟಿ ನೀಡುವರು. ಬಿಎಲ್ಒಗಳು ಪ್ರತಿ ಮತದಾರರಿಗೆ ಎರಡು ಪ್ರತಿಗಳಿರುವ ‘ಎನ್ಯೂಮರೇಷನ್ ಫಾರ್ಮ್’ ನೀಡಲಿದ್ದಾರೆ. ಸಾರ್ವಜನಿಕರು ಒಂದನ್ನು ಭರ್ತಿ ಮಾಡಿ ಬಿಎಲ್ಒಗೆ ನೀಡಬೇಕು ಹಾಗೂ ಮತ್ತೊಂದು ಪ್ರತಿಯಲ್ಲಿ ಬಿಎಲ್ಒ ಅವರಿಂದ ಸಹಿ ಪಡೆದು ಸ್ವೀಕೃತಿ ಇಟ್ಟುಕೊಳ್ಳಬೇಕು ಎಂದು ವಿವರಿಸಿದರು.
ಇನ್ನೋರ್ವ ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರ ಅಕ್ಕಿ ಮಲ್ಲಿಕಾರ್ಜುನ ಅವರು ಮಾತನಾಡಿ, 2002 ರ ಹಳೆಯ ಫೋಟೋಗಳ ಬದಲಾಗಿ ಪ್ರಸ್ತುತ ಪಟ್ಟಿಗಾಗಿ ಸಾರ್ವಜನಿಕರು ತಮ್ಮ ಹೊಸ ಭಾವಚಿತ್ರವನ್ನು ಸಿದ್ಧವಾಗಿಟ್ಟುಕೊಂಡು ಬಿಎಲ್ಒಗಳಿಗೆ ನೀಡಬೇಕು. ಈ ಪ್ರೀ-ಪ್ರಿಂಟೆಡ್ ಫಾರ್ಮ್ಗಳು ಕ್ಯೂಆರ್ ಕೋಡ್ ಒಳಗೊಂಡಿದ್ದು, ಅತ್ಯಂತ ಗೌಪ್ಯವಾಗಿವೆ. ಇವುಗಳನ್ನು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವಂತಿಲ್ಲ ಹಾಗೂ ಹೊರಗಡೆ ಕೊಂಡೊಯ್ಯುವಂತಿಲ್ಲ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕಸ್ತೂರಿ, ಜಿಲ್ಲಾ ಪಂಚಾಯತ್ ನ ಸಹಾಯಕ ನಿರ್ದೇಶಕ ಬಸವರಾಜ ಹಿರೇಮಠ ಸೇರಿದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ್ ನ ಪ್ರಥಮ ದರ್ಜೆ ಸಹಾಯಕ ಸುಹೇಲ್ ಸ್ವಾಗತಿಸಿದರು. ವಿಜಯ್ ಕುಮಾರ್ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್