
ನವದೆಹಲಿ, 10 ಜೂನ್ (ಹಿ.ಸ.) :
ಆ್ಯಂಕರ್ : ಭಾರತದ ಅತ್ಯಂತ ದೀರ್ಘಾವಧಿಯ ನಿರಂತರವಾಗಿ ಆಯ್ಕೆಯಾದ ಪ್ರಧಾನಮಂತ್ರಿಯಾಗಿ ಹೊಸ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಪ್ರಧಾನಿ ಮೋದಿ ಅವರ ಸಾಧನೆ ಕೇವಲ ಅಧಿಕಾರದಲ್ಲಿದ್ದ ಅವಧಿಯ ಅಳತೆಯಲ್ಲ; ಅದು ಭಾರತದ ರಾಷ್ಟ್ರೀಯ ಅಭಿವೃದ್ಧಿ ಪಯಣದಲ್ಲಿ ಸಂಭವಿಸಿದ ಪರಿವರ್ತನಾ ಯುಗದ ಪ್ರತಿಬಿಂಬವಾಗಿದೆ ಎಂದು ಹೇಳಿದ್ದಾರೆ.
ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ವಿಸ್ತರಣೆ, ಸಾಮಾಜಿಕ ಸಬಲೀಕರಣ, ತಾಂತ್ರಿಕ ಪ್ರಗತಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ವೃದ್ಧಿಗೆ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಪ್ರಮುಖ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಬ್ರಹಾಂ ಲಿಂಕನ್ ಅವರು ಲಕ್ಷಾಂತರ ಜನರನ್ನು ಗುಲಾಮಗಿರಿಯ ಬಂಧನದಿಂದ ಮುಕ್ತಗೊಳಿಸಿದಂತೆ, ಪ್ರಧಾನಿ ಮೋದಿ ಅವರ ಸಮಗ್ರ ಅಭಿವೃದ್ಧಿ ನೀತಿಗಳಿಂದ 25 ಕೋಟಿಗೂ ಹೆಚ್ಚು ಜನರು ಸಂಪೂರ್ಣ ಬಡತನದ ಸ್ಥಿತಿಯಿಂದ ಹೊರಬಂದಿದ್ದಾರೆ ಎಂದು ರಾಧಾಕೃಷ್ಣನ್ ಉಲ್ಲೇಖಿಸಿದ್ದಾರೆ. ಇದರಿಂದ ಕೋಟ್ಯಂತರ ಕುಟುಂಬಗಳಿಗೆ ಹೊಸ ಭರವಸೆ, ಅವಕಾಶ ಮತ್ತು ಘನತೆಯ ಬದುಕು ದೊರೆತಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಸಾಂಸ್ಕೃತಿಕ ಪರಂಪರೆಯ ಪುನರುಜ್ಜೀವನಕ್ಕೂ ಪ್ರಧಾನಿ ಮೋದಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಮರೆತುಹೋದ ವೀರರನ್ನು ಸ್ಮರಿಸುವುದು, ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸುವುದು, ವಸಾಹತುಶಾಹಿ ಮನೋಭಾವವನ್ನು ತೊಡೆದುಹಾಕುವುದು ಮತ್ತು ಭಾರತೀಯ ನಾಗರಿಕತೆಯ ಬಗ್ಗೆ ಹೆಮ್ಮೆ ಮೂಡಿಸುವ ಕಾರ್ಯಗಳಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ತಮಿಳು ಋಷಿ ಕಣಿಯನ್ ಪೂಂಗುಂದ್ರನಾರ್ ಅವರ ಯಾದುಮ್ ಊರೇ, ಯಾವರುಮ್ ಕೇಳಿರ್ ಎಂಬ ಸಂದೇಶವನ್ನು ಉಲ್ಲೇಖಿಸುವ ಮೂಲಕ ಪ್ರಧಾನಿ ಮೋದಿ ಅವರು ಭಾರತದ ‘ವಸುಧೈವ ಕುಟುಂಬಕಂ’ ತತ್ವವನ್ನು ಜಗತ್ತಿನ ಮುಂದೆ ಪುನರುಚ್ಚರಿಸಿದ್ದಾರೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.
ಕಾಶಿ ತಮಿಳು ಸಂಗಮ, ಸೌರಾಷ್ಟ್ರ ತಮಿಳು ಸಂಗಮ, ಹೊಸ ಸಂಸತ್ ಭವನದಲ್ಲಿ ಪವಿತ್ರ ಸೆಂಗೋಲ್ ಸ್ಥಾಪನೆ, ಗಂಗೈಕೊಂಡ ಚೋಳಪುರಂ ಭೇಟಿ ಹಾಗೂ ವಿದೇಶಗಳಿಂದ ಐತಿಹಾಸಿಕ ಕಲಾಕೃತಿಗಳನ್ನು ಮರಳಿ ತರುವಂತಹ ಉಪಕ್ರಮಗಳು ಭಾರತದ ಸಾಂಸ್ಕೃತಿಕ ಏಕತೆ ಮತ್ತು ನಾಗರಿಕತೆಯ ಪರಂಪರೆಯನ್ನು ಮತ್ತಷ್ಟು ಬಲಪಡಿಸಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸವು ರಾಷ್ಟ್ರಗಳನ್ನು ಪರಿವರ್ತಿಸುವ ಮತ್ತು ಪೀಳಿಗೆಗಳಿಗೆ ಸ್ಫೂರ್ತಿ ನೀಡುವ ನಾಯಕರನ್ನು ಸದಾ ಸ್ಮರಿಸುತ್ತದೆ. ಭಾರತದ ಇತಿಹಾಸದ ಮಹತ್ವದ ಘಟ್ಟದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ದೂರದೃಷ್ಟಿಯ ನಾಯಕತ್ವ, ದಣಿವರಿಯದ ಸೇವೆ ಮತ್ತು ರಾಷ್ಟ್ರಪ್ರಥಮ ಬದ್ಧತೆಯ ಮೂಲಕ ಸಮಕಾಲೀನ ಭಾರತದ ನಿಜವಾದ ಯುಗಪುರುಷರಾಗಿ ಹೊರಹೊಮ್ಮಿದ್ದಾರೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ.
2047ರ ವಿಕ್ಷಿತ್ ಭಾರತ್ ಗುರಿಯತ್ತ ದೇಶ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವವು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯ ಮೂಲವಾಗಿದ್ದು, ರಾಷ್ಟ್ರದ ಭವಿಷ್ಯದ ಪಯಣಕ್ಕೆ ಮಾರ್ಗದರ್ಶಕ ಶಕ್ತಿಯಾಗಿ ಮುಂದುವರಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.