
ನವದೆಹಲಿ, 10 ಜೂನ್ (ಹಿ.ಸ.) :
ಆ್ಯಂಕರ್ : ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿ 4,399 ದಿನಗಳನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ರಾಜನಾಥ್ ಸಿಂಗ್, ರಾಷ್ಟ್ರ ಮೊದಲು ಎಂಬ ತತ್ವದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ದಣಿವರಿಯದ ಕರ್ಮಯೋಗಿಯಾಗಿರುವ ಪ್ರಧಾನಿ ಮೋದಿ ಅವರ ಆಡಳಿತಾವಧಿಯು ಭಾರತಕ್ಕೆ ಅಚಲ ಸಮರ್ಪಣೆ, ಜನರ ಕಲ್ಯಾಣದ ಬಗ್ಗೆ ದೃಢ ಬದ್ಧತೆ ಹಾಗೂ ರಾಷ್ಟ್ರಸೇವೆಯ ಪರಿವರ್ತನಾತ್ಮಕ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಈ ಸಾಧನೆಯು ಅವರ ನಾಯಕತ್ವದ ಮೇಲೆ ಭಾರತದ ಜನತೆ ಇಟ್ಟಿರುವ ಶಾಶ್ವತ ನಂಬಿಕೆಗೆ ಸಾಕ್ಷಿಯಾಗಿದ್ದು, ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತಕ್ಕಾಗಿ ಅವರು ನಡೆಸುತ್ತಿರುವ ನಿರಂತರ ಪ್ರಯತ್ನಗಳ ಪ್ರತಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 12 ವರ್ಷಗಳಲ್ಲಿ ಭಾರತವು ಅಭಿವೃದ್ಧಿ, ಆರ್ಥಿಕ ಪ್ರಗತಿ ಮತ್ತು ಜಾಗತಿಕ ನಾಯಕತ್ವದಲ್ಲಿ ಗಮನಾರ್ಹ ಸಾಧನೆ ಮಾಡಿರುವುದರ ಜೊತೆಗೆ, ತನ್ನ ನಾಗರಿಕತೆಯ ಪುನರುಜ್ಜೀವನವನ್ನು ಅನುಭವಿಸಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಇದರಿಂದ ದೇಶವು ಹೆಚ್ಚು ಆತ್ಮವಿಶ್ವಾಸಿ, ಸ್ವಾಭಿಮಾನಿ ಹಾಗೂ ತನ್ನ ಸಾಂಸ್ಕೃತಿಕ ಪರಂಪರೆಯಲ್ಲಿ ಬೇರೂರಿರುವ ರಾಷ್ಟ್ರವಾಗಿ ರೂಪುಗೊಂಡಿದೆ ಎಂದು ಅವರು ಹೇಳಿದ್ದಾರೆ.
ವಿಕಸಿತ ಭಾರತ ಗುರಿಯತ್ತ ದೇಶ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವ ಭಾರತವನ್ನು ಇನ್ನಷ್ಟು ಸಮೃದ್ಧಿ, ಪ್ರಗತಿ ಮತ್ತು ಜಾಗತಿಕ ಪ್ರಾಮುಖ್ಯತೆಯತ್ತ ಕೊಂಡೊಯ್ಯಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರು 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2026ರ ಜೂನ್ 10ರ ವೇಳೆಗೆ 4,399 ದಿನಗಳ ಕಾಲ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಹಿಂದಿಕ್ಕಿರುವುದು ಗಮನಾರ್ಹವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.