
ನವದೆಹಲಿ, 01 ಜೂನ್ (ಹಿ.ಸ.) :
ಆ್ಯಂಕರ್ : ವಿಶ್ವ ಹಾಲು ದಿನದ ಅಂಗವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಹೈನುಗಾರರು, ಹಾಲು ಉತ್ಪಾದಕರು ಹಾಗೂ ಸಹಕಾರಿ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಶ್ವೇತ ಕ್ರಾಂತಿಯ ಪರಿಣಾಮವಾಗಿ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
1970ರಲ್ಲಿ ಆರಂಭವಾದ ‘ಆಪರೇಷನ್ ಫ್ಲಡ್’ ಹಾಗೂ ರಾಷ್ಟ್ರೀಯ ಹಾಲು ಜಾಲ (ನ್ಯಾಷನಲ್ ಮಿಲ್ಕ್ ಗ್ರಿಡ್) ಯೋಜನೆಗಳು ದೇಶದ ಲಕ್ಷಾಂತರ ಹೈನು ರೈತರ ಬದುಕನ್ನು ಪರಿವರ್ತಿಸಿದವು. ಈ ಯೋಜನೆಗಳು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವುದರ ಜೊತೆಗೆ ದೇಶದಾದ್ಯಂತ ಪ್ರತಿಯೊಂದು ಮನೆಗೂ ಕೈಗೆಟುಕುವ ದರದಲ್ಲಿ ಹಾಲು ದೊರೆಯುವಂತೆ ಮಾಡಿವೆ ಎಂದು ಖರ್ಗೆ ಉಲ್ಲೇಖಿಸಿದ್ದಾರೆ.
ಭಾರತದ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದ ಇತಿಹಾಸದಲ್ಲಿ ಶ್ವೇತ ಕ್ರಾಂತಿಯು ಅತ್ಯಂತ ಮಹತ್ವದ ಯಶೋಗಾಥೆಗಳಲ್ಲಿ ಒಂದಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ದೇಶದ ಆರ್ಥಿಕತೆ, ಗ್ರಾಮೀಣಾಭಿವೃದ್ಧಿ ಹಾಗೂ ಆಹಾರ ಭದ್ರತೆಯಲ್ಲಿ ಹೈನುಗಾರಿಕಾ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ವಿಶ್ವ ಹಾಲು ದಿನದ ಸಂದರ್ಭದಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ ಎಲ್ಲ ರೈತರು ಮತ್ತು ಸಹಕಾರಿ ಸಂಸ್ಥೆಗಳಿಗೆ ಖರ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.