
ನವದೆಹಲಿ, 01 ಜೂನ್ (ಹಿ.ಸ.) :
ಆ್ಯಂಕರ್ : ಭಾರತೀಯ ತಾಂತ್ರಿಕ ಶಿಕ್ಷಣ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪ್ರವೇಶ ಪರೀಕ್ಷೆಗಳಲ್ಲಿ ಒಂದಾದ ಜೆಇಇ ಅಡ್ವಾನ್ಸ್ಡ್-2026ರ ಫಲಿತಾಂಶವನ್ನು ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ರೂರ್ಕಿ ಭಾನುವಾರ ಪ್ರಕಟಿಸಿದೆ. ಈ ವರ್ಷದ ಪರೀಕ್ಷೆಯಲ್ಲಿ ದೆಹಲಿ ವಲಯದ ಶುಭಂ ಕುಮಾರ್ 360 ಅಂಕಗಳಲ್ಲಿ 330 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ದೆಹಲಿಯವರೇ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದು, ಕಬೀರ್ ಛಿಲ್ಲರ್ 329 ಅಂಕಗಳೊಂದಿಗೆ ದ್ವಿತೀಯ ಹಾಗೂ ಜತಿನ್ ಚಹರ್ 319 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಇದರೊಂದಿಗೆ ದೇಶದ ಅಗ್ರ ಮೂರು ಸ್ಥಾನಗಳಲ್ಲೂ ದೆಹಲಿ ವಲಯದ ವಿದ್ಯಾರ್ಥಿಗಳು ಪ್ರಾಬಲ್ಯ ಮೆರೆದಿದ್ದಾರೆ.
ನಿಗದಿತ ವೇಳೆಗೆ ಮುನ್ನವೇ ಫಲಿತಾಂಶ ಪ್ರಕಟಿಸಿರುವ ಐಐಟಿ ರೂರ್ಕಿ ಅಂತಿಮ ಉತ್ತರ ಕೀಲಿಯನ್ನೂ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ಮತ್ತು ರೋಲ್ ನಂಬರ್ ಬಳಸಿ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಪರಿಶೀಲಿಸಬಹುದಾಗಿದೆ.
ಈ ವರ್ಷ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ 1,87,389 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 1,79,694 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 56,880 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಒಟ್ಟು ಪರೀಕ್ಷಾರ್ಥಿಗಳಲ್ಲಿ ಸುಮಾರು 31.65 ಶೇಕಡಾ ಮಂದಿ ಯಶಸ್ವಿಯಾಗಿದ್ದಾರೆ. ಯಶಸ್ವಿ ಅಭ್ಯರ್ಥಿಗಳು ಇದೀಗ ಜಂಟಿ ಸೀಟು ಹಂಚಿಕೆ ಪ್ರಕ್ರಿಯೆ (ಜೋಸಾ) ಮೂಲಕ ದೇಶದ 23 ಐಐಟಿಗಳಲ್ಲಿ ಪ್ರವೇಶ ಪಡೆಯಲು ಅವಕಾಶ ಹೊಂದಿದ್ದಾರೆ.
ಅರ್ಹತೆ ಪಡೆದವರಲ್ಲಿ 10,107 ವಿದ್ಯಾರ್ಥಿನಿಯರೂ ಸೇರಿರುವುದು ವಿಶೇಷ. ಮಹಿಳಾ ಅಭ್ಯರ್ಥಿಗಳ ಪೈಕಿ ದೆಹಲಿ ವಲಯದ ಆರೋಹಿ ದೇಶಪಾಂಡೆ ಅತ್ಯುತ್ತಮ ಸಾಧನೆ ತೋರಿದ್ದು, 360ರಲ್ಲಿ 280 ಅಂಕ ಗಳಿಸಿ ಅಖಿಲ ಭಾರತ ಶ್ರೇಯಾಂಕ ಪಟ್ಟಿಯಲ್ಲಿ 77ನೇ ಸ್ಥಾನ ಪಡೆದಿದ್ದಾರೆ.
ಈ ಬಾರಿಯ ಸಾಮಾನ್ಯ ವರ್ಗದ ಕಟ್-ಆಫ್ 92 ಅಂಕಗಳಿಗೆ ಏರಿಕೆಯಾಗಿದೆ. ಇದು ಕಳೆದ ವರ್ಷದಿಗಿಂತ 18 ಅಂಕ ಹೆಚ್ಚು ಎನ್ನುವುದು ಗಮನಾರ್ಹ. ವಿಷಯವಾರು ಕನಿಷ್ಠ ಅರ್ಹತಾ ಅಂಕವನ್ನು 8 ಎಂದು ನಿಗದಿಪಡಿಸಲಾಗಿದೆ. ಹೆಚ್ಚಿದ ಕಟ್-ಆಫ್ ಮತ್ತು ಹೆಚ್ಚಿನ ಯಶಸ್ಸಿನ ಪ್ರಮಾಣವು ವಿದ್ಯಾರ್ಥಿಗಳ ಉತ್ತಮ ಸಾಧನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತರೆ ವಲಯಗಳ ಅಭ್ಯರ್ಥಿಗಳೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಐಐಟಿ ಮದ್ರಾಸ್ ವಲಯದ ಮೋಹಿತ್ ಶೇಖರ್ ಶುಕ್ಲಾ ನಾಲ್ಕನೇ ಸ್ಥಾನ, ಐಐಟಿ ಮುಂಬೈ ವಲಯದ ಬಿ. ಜಯಕೃಷ್ಣ ಶ್ರೀನಿವಾಸ್ ಆರನೇ ಸ್ಥಾನ, ಐಐಟಿ ರೂರ್ಕಿ ವಲಯದ ನಿಕುಂಜ್ ಅಗ್ರವಾಲ್ 11ನೇ ಸ್ಥಾನ, ಐಐಟಿ ಕಾನ್ಪುರ ವಲಯದ ರಿದ್ಧೇಶ್ ಅನಂತ ಬೆಂಡಾಲೆ 18ನೇ ಸ್ಥಾನ ಹಾಗೂ ಐಐಟಿ ಭುವನೇಶ್ವರ ವಲಯದ ಭಾವೇಶ್ ಪಾತ್ರ 29ನೇ ಸ್ಥಾನ ಪಡೆದಿದ್ದಾರೆ. ಐಐಟಿ ಗುವಾಹಟಿ ವಲಯದ ಯಶರಾಜ್ ಸಿಂಗ್ 122ನೇ ರ್ಯಾಂಕ್ ಗಳಿಸಿದ್ದಾರೆ.
ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯು ದೇಶದ 23 ಭಾರತೀಯ ತಾಂತ್ರಿಕ ಸಂಸ್ಥೆಗಳಲ್ಲಿ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಪ್ರಮುಖ ಮಾನದಂಡವಾಗಿದ್ದು, ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ಸೀಟು ಹಂಚಿಕೆ ಮತ್ತು ಪ್ರವೇಶ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.