
ನವದೆಹಲಿ, 01 ಜೂನ್ (ಹಿ.ಸ.) :
ಆ್ಯಂಕರ್ : ಇಂದಿನಿಂದ 19 ಕೆ.ಜಿ. ತೂಕದ ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು ₹42 ಹೆಚ್ಚಿಸಲಾಗಿದ್ದು, ಹೊಸ ದರ ₹3,113.50ಕ್ಕೆ ತಲುಪಿದೆ. ಕೋಲ್ಕತ್ತದಲ್ಲಿ ₹53.50 ಏರಿಕೆಯಾಗಿದ್ದು, 19 ಕೆ.ಜಿ. ಸಿಲಿಂಡರ್ ಬೆಲೆ ₹3,255.50 ಆಗಿದೆ.
ಇದರೊಂದಿಗೆ 5 ಕೆ.ಜಿ. ತೂಕದ ಸಣ್ಣ ಎಫ್ಟಿಎಲ್ ಸಿಲಿಂಡರ್ ಬೆಲೆಯನ್ನೂ ₹11 ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಈ ಸಿಲಿಂಡರ್ ಈಗ ₹821.50ಕ್ಕೆ ಲಭ್ಯವಾಗಲಿದೆ. ಆದರೆ, ಸಾಮಾನ್ಯ ಗ್ರಾಹಕರು ಬಳಸುವ 14.2 ಕೆ.ಜಿ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ತೈಲ ಮತ್ತು ಅನಿಲ ವಿತರಣಾ ಕಂಪನಿಗಳು ಪ್ರಕಟಿಸಿರುವ ಹೊಸ ದರಗಳು ಜೂನ್ 1ರಿಂದಲೇ ಜಾರಿಗೆ ಬಂದಿವೆ. ವಾಣಿಜ್ಯ ಬಳಕೆಯ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣ ಉದ್ಯಮಗಳಿಗೆ ಈ ಬೆಲೆ ಏರಿಕೆ ಹೆಚ್ಚುವರಿ ಹೊರೆ ತರಲಿದೆ.
ಇದೇ ವೇಳೆ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ಎವಿಯೇಷನ್ ಟರ್ಬೈನ್ ಫ್ಯುಯೆಲ್ - ಎಟಿಎಫ್) ಮೇಲಿನ ರಫ್ತು ಸುಂಕವನ್ನು ಕಡಿತಗೊಳಿಸಿ ಕೈಗಾರಿಕಾ ವಲಯಕ್ಕೆ ಸ್ವಲ್ಪ ಮಟ್ಟಿನ ನೆಮ್ಮದಿ ನೀಡಿದೆ.
ಕೇಂದ್ರ ಸರ್ಕಾರದ ಪ್ರಕಟಣೆಯ ಪ್ರಕಾರ, ಪೆಟ್ರೋಲ್ ರಫ್ತಿನ ಮೇಲಿನ ವಿಂಡ್ಫಾಲ್ ಗೇನ್ ತೆರಿಗೆಯನ್ನು ಅರ್ಧಕ್ಕಿಳಿಸಿ ಪ್ರತಿ ಲೀಟರ್ಗೆ ₹1.50 ನಿಗದಿಪಡಿಸಲಾಗಿದೆ. ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ಗೆ ₹13.50ಕ್ಕೆ ಮತ್ತು ಎಟಿಎಫ್ ಮೇಲಿನ ತೆರಿಗೆಯನ್ನು ₹9.50ಕ್ಕೆ ಇಳಿಸಲಾಗಿದೆ.
ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲಿನ ರಸ್ತೆ ಹಾಗೂ ಮೂಲಸೌಕರ್ಯ ಸೆಸ್ನ್ನು ಶೂನ್ಯಕ್ಕೆ ಇಳಿಸಲಾಗಿದೆ. ಆದರೆ ದೇಶೀಯ ಬಳಕೆಯ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಸಾಮಾನ್ಯ ವಾಹನ ಸವಾರರ ಮೇಲೆ ಈ ನಿರ್ಧಾರದಿಂದ ತಕ್ಷಣದ ಪರಿಣಾಮ ಬೀರುವ ಸಾಧ್ಯತೆ ಇಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh.M.B.