ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಧಾರ್ಮಿಕ ಶ್ರದ್ಧೆ ಕಲಿಸುವ ಹೊಣೆ ಪಾಲಕರದ್ದು : ಶಿವಾಚಾರ್ಯ ಸ್ವಾಮೀಜಿ
ಗದಗ, 30 ಮೇ (ಹಿ.ಸ.) : ಆ್ಯಂಕರ್ : ಇಂದಿನ ಮಕ್ಕಳಿಗೆ ಕೇವಲ ಶಿಕ್ಷಣ ನೀಡುವುದಷ್ಟೇ ಸಾಕಾಗುವುದಿಲ್ಲ. ಧಾರ್ಮಿಕ ಶ್ರದ್ಧೆ, ಉತ್ತಮ ಸಂಸ್ಕಾರ, ನಡೆ-ನುಡಿ ಹಾಗೂ ಆಚಾರ-ವಿಚಾರಗಳನ್ನು ಬಾಲ್ಯದಿಂದಲೇ ಕಲಿಸುವ ಮಹತ್ವದ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ
ಫೋಟೋ


ಗದಗ, 30 ಮೇ (ಹಿ.ಸ.) :

ಆ್ಯಂಕರ್ : ಇಂದಿನ ಮಕ್ಕಳಿಗೆ ಕೇವಲ ಶಿಕ್ಷಣ ನೀಡುವುದಷ್ಟೇ ಸಾಕಾಗುವುದಿಲ್ಲ. ಧಾರ್ಮಿಕ ಶ್ರದ್ಧೆ, ಉತ್ತಮ ಸಂಸ್ಕಾರ, ನಡೆ-ನುಡಿ ಹಾಗೂ ಆಚಾರ-ವಿಚಾರಗಳನ್ನು ಬಾಲ್ಯದಿಂದಲೇ ಕಲಿಸುವ ಮಹತ್ವದ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಹಳ್ಳದಕೇರಿಯ ಕರೆವಾಡಿಮಠದಲ್ಲಿ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾಧಕರ ಸನ್ಮಾನ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಜಂಗಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಾತನಾಡಿದ ಅವರು, ಜಂಗಮ ಸಮಾಜವು ಸಮಾಜಕ್ಕೆ ಸಂಸ್ಕಾರ ಮತ್ತು ಧಾರ್ಮಿಕ ಮೌಲ್ಯಗಳನ್ನು ನೀಡುವ ಪ್ರಮುಖ ಸಮುದಾಯವಾಗಿದ್ದು, ಇತರೆ ಸಮಾಜಗಳಿಗೆ ಮಾದರಿಯಾಗುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅನಾದಿಕಾಲದಿಂದಲೂ ಜಂಗಮ ಸಮುದಾಯವು ಧಾರ್ಮಿಕ ಪದ್ಧತಿ, ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಬಂದಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹೊಣೆಗಾರಿಕೆ ಇಂದಿನ ಸಮಾಜದ ಮೇಲಿದೆ ಎಂದು ತಿಳಿಸಿದರು.

ಶಿಕ್ಷಣವು ಮಕ್ಕಳ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದರೂ, ಅದರ ಜೊತೆಗೆ ಮಾನವೀಯ ಮೌಲ್ಯಗಳು, ಧಾರ್ಮಿಕ ಭಾವನೆ ಹಾಗೂ ನೈತಿಕ ಜೀವನದ ಪಾಠಗಳು ಸಹ ಮಕ್ಕಳಿಗೆ ತಿಳಿಯಬೇಕು. ಇವುಗಳ ಕೊರತೆಯಿಂದ ಸಮಾಜದಲ್ಲಿ ಮೌಲ್ಯಗಳ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಾಧಕರನ್ನು ಹಾಗೂ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸಾರ್ವಜನಿಕವಾಗಿ ಸನ್ಮಾನಿಸುವ ಕಾರ್ಯ ಅತ್ಯಂತ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಾಧನೆಯ ಮನೋಭಾವ ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಸ್ಪರ್ಧಾತ್ಮಕ ಚೈತನ್ಯ ಮೂಡಿಸುತ್ತವೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನರಸಾಪುರ ಹಾಗೂ ಕದಂಪುರ ಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಮಕ್ಕಳಲ್ಲಿ ಸಾಧನೆ ಮಾಡುವ ಮನೋಭಾವವನ್ನು ಬೆಳೆಸುವ ಕೆಲಸ ಕುಟುಂಬದಿಂದಲೇ ಆರಂಭವಾಗಬೇಕು ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಸ್ಪಷ್ಟ ಗುರಿಯನ್ನು ಹೊಂದಿ ಪರಿಶ್ರಮ ಪಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಸಾಮಾಜಿಕ ಮೌಲ್ಯಗಳನ್ನು ಕಲಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕರೆವಾಡಿಮಠದ ಶ್ರೀ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕರೆವಾಡಿಮಠದ ನಿಯೋಜಿತ ಉತ್ತರಾಧಿಕಾರಿಗಳಾದ ಮಂಜುನಾಥ ದೇವರು ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ತಮ್ಮ ಸಾಧನೆಗಳನ್ನು ಸಮಾಜದ ಅಭಿವೃದ್ಧಿಗೆ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಾರೈಸಿದರು.

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಮತ್ತು ಸಂಸ್ಕಾರ ಎರಡೂ ಸಮಾಜದ ಬಲಿಷ್ಠ ನೆಲೆಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸುವ ಮೂಲಕ ಅವರನ್ನು ಮತ್ತಷ್ಟು ಉತ್ತೇಜಿಸುವ ಕೆಲಸ ಸಂಘ-ಸಂಸ್ಥೆಗಳು ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಅಖಿಲ ಭಾರತೀಯ ಜಂಗಮ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೆ.ವಿ. ಹಿರೇಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೀರಭದ್ರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಹಾಗೂ ಸಮಾಜದ ಶೈಕ್ಷಣಿಕ ಪ್ರಗತಿಗೆ ಸಂಘ ಕೈಗೊಂಡಿರುವ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸಪ್ಪ ಪಾಟೀಲ ಹಾಗೂ ಲಕ್ಷ್ಮೇಶ್ವರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಸುನಂದಾ ಹಿರೇಮಠ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಂಕ್ರಯ್ಯ ಪೂಜಾರ ಹಾಗೂ ಮುರುಗೇಂದ್ರಯ್ಯ ಹಿರೇಮಠ ವೇದಘೋಷಣೆ ಮಾಡಿದರು. ಮಹೇಶ್ ಲಿಂಬಯ್ಯಸ್ವಾಮಿಮಠ, ಸಿ.ಆರ್. ಲಕ್ಕುಂಡಿಮಠ, ಶಿವಯೋಗಿ ಗಡ್ಡದೇವರಮಠ, ಪಂಚಯ್ಯ ಸಾಲಿಮಠ, ರುದ್ರಮುನಿಸ್ವಾಮಿ ಎಸ್.ಪಿ. ಘಂಟಾಮಠ, ಸಭಾವಡೆಮಠ, ನೀಲಕಂಠಯ್ಯ ಹಿರೇಮಠ, ಶಿವರಾಜ ಕರೆವಾಡಿಮಠ, ಜಿಲ್ಲಾ ಅಖಿಲ ಭಾರತೀಯ ಜಂಗಮ ಸೇವಾ ಸಮಿತಿಯ ವೀರಯ್ಯ ಹೊಸಮಠ, ತೋಟಪಯ್ಯ ಗುಡ್ಡಿಮಠ, ಕುಮಾರಸ್ವಾಮಿ ಹಿರೇಮಠ, ಸಂತೋಷ ಹಿರೇಮಠ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾರ್ಯಕ್ರಮವು ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವುದರ ಜೊತೆಗೆ ಶಿಕ್ಷಣ, ಸಂಸ್ಕಾರ ಹಾಗೂ ಧಾರ್ಮಿಕ ಮೌಲ್ಯಗಳ ಮಹತ್ವವನ್ನು ಸಮಾಜಕ್ಕೆ ಸಾರಿದ ಅರ್ಥಪೂರ್ಣ ವೇದಿಕೆಯಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande