
ಕೋಲಾರ, ೩೦ ಮೇ (ಹಿ.ಸ) :
ಆ್ಯಂಕರ್ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾದರೂ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲಿದೆ ವಿರೋಧಿಗಳ ಅಪಪ್ರಚಾರಕ್ಕೆ ಕಿವಿ ಕೊಡದೆ ಗ್ಯಾರಂಟಿ ಯೋಜನೆಗಳ ಸವಲತ್ತುಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತಷ್ಟು ದಕ್ಷತೆ ಹಾಗು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಗ್ಯಾರಂಟಿ ಸಮಿತಿಗಳ ಪ್ರಾಧಿಕಾರದ ತಾಲೂಕು ಅಧ್ಯಕ್ಷ ವೇಮಗಲ್ ವಿ.ಎಂ ಮುನಿಯಪ್ಪ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ, ಜವಾಬ್ದಾರಿ ಮತ್ತು ಸಮನ್ವಯತೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಉತ್ತಮ ಫಲಿತಾಂಶ ಸಾಧಿಸಲು ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೇರಿದಂತೆ ಉಳಿದ ಗ್ಯಾರಂಟಿ ಯೋಜನೆಗಳ ಸಮಗ್ರ ಪರಿಷ್ಕರಣೆ ಹಾಗೂ ಅನರ್ಹರು ಸೌಲಭ್ಯ ಪಡೆಯುತ್ತಿದ್ದರೆ ಅದನ್ನು ತಡೆಗಟ್ಟಿ, ಕೇವಲ ಅರ್ಹರಿಗೆ ಮಾತ್ರ ಯೋಜನೆಗಳನ್ನು ತಲುಪಿಸಬೇಕು ಸಮಿತಿ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ನಿರಂತರವಾಗಿ ಜನರ ಮಧ್ಯೆ ಇದ್ದು ಅವರಿಗೆ ಜನರ ಕಷ್ಟ ಏನೆಂದು ಗೊತ್ತು ಅವರಿಂದ ಅಧಿಕಾರಿಗಳು ಮಾಹಿತಿ ಪಡೆದು ಫಲಾನುಭವಿಯಾಗಿ ಮಾಡಬೇಕು ಜೊತೆಗೆ ಅಧಿಕಾರಿಗಳು ಫಲಾನುಭವಿಗಳಿಗೆ ಸಂದಾಯವಾದ ಅಷ್ಟು ದಾಖಲೆಗಳು ಪ್ರತಿ ತಿಂಗಳ ಮಾಹಿತಿಯನ್ನು ಕೊಡಬೇಕು ಎಂದು ಸೂಚನೆ ನೀಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರ ಜೀವನ ಮಟ್ಟವನ್ನು ಉತ್ತಮಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಅನಿಟ್ಟಿನಲ್ಲಿ ಮುಂದಿನ ವಾರದಿಂದ ಗ್ರಾಪಂ ಮಟ್ಟದಲ್ಲಿ ಕುಂದುಕೊರತೆಗಳ ಸಭೆ ಮಾಡಿ ಅಲ್ಲಿ ಫಲಾನುಭವಿಗಳ ಆಯ್ಕೆಗೆ ಇರುವ ತೊಡಕುಗಳನ್ನು ಸರಿಪಡಿಸಲಾಗುತ್ತದೆ ಗ್ರಾಮ ಪಂಚಾಯಿತಿಯ ಪಿಡಿಒ ನೇತೃತ್ವದಲ್ಲಿ ಅಂಗನವಾಡಿ, ಅಶಾ ಕಾರ್ಯಕರ್ತರ ಮೂಲಕ ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಂಜುನಾಥ್ ಪ್ರಸಾದ್, ಸಿಡಿಪಿಓ, ಬೆಸ್ಕಾಂ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಕೆಎಸ್ಆರ್ಟಿಸಿ, ಯುವನಿಧಿ ಯೋಜನೆಗಳ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಗ್ಯಾರಂಟಿ ಸಮಿತಿ ಸದಸ್ಯರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್